ರಂಜನೆಯೂ, ಸಂಸ್ಕೃತಿಯೂ ಒಂದು ಮಾದರಿಯಲ್ಲಿ ನಡೆಯುವಾಗ - ಮೂಲತಃ ಸಾರ್ವಜನಿಕವಾಗಿದ್ದುದು, ಆ ಬಳಿಕ ಕ್ಲಿಷ್ಟವಾಗಿ, ಗುಂಪಿನ ಸೊತ್ತಾಗುತ್ತದೆ. ಆಗ ಜನಾಭಿಮುಖತೆಯ ಸುಧಾರಣೆ ಹೊರಡುತ್ತದೆ. ಆಗಮಗಳು, ದೇವಾಲಯ ಭಜನಾ ಮಂದಿರ, ಬಯಲಾಟಗಳಲ್ಲೆಲ್ಲ ಈ ಬಗೆಯನ್ನು ಕಾಣಬಹುದು. ಇವೆಲ್ಲವೂ ಧಾರ್ಮಿಕ-ಸಾಂಸ್ಕೃತಿಕವಾದ ಹೆಜ್ಜೆಗಳೇ. ಸಾಂಸ್ಕೃತಿಕ ಪ್ರಕಾರಗಳು ಸಮಸ್ಯೆಗಳ ಮುಖಾಮುಖಿಯಲ್ಲಿ ಸುಧಾರಿತವಾಗುವುದಷ್ಟೆ?
ಊರಿಂದೂರಿಗೆ ಅಲೆಯುತ್ತ ಜನರಿಗೆ ರಂಜನೆ ಒದಗಿಸುತ್ತ ಇದ್ದ ಅಂದಿನ ಬಹುರೂಪಿ, ಮೊದಲಾದ ಮಾಧ್ಯಮಗಳು ಒಂದು ಕಡೆಗಿದ್ದರೆ, ದೇವಾಲಯಗಳನ್ನು ಆಶ್ರಯಿಸಿ ಮೇಳವೆಂಬ ವ್ಯವಸ್ಥೆ ಆರಾಧನಾರ್ಥವಾಗಿಯೇ ಆರಂಭವಾಯಿತು. ಪ್ರಾಯಃ ಮೊದಲು ಆಟಗಳ ಮೇಳಗಳು ದೇವಾಲಯ ಇರುವೆಡೆಯಲ್ಲಿ ಇದ್ದುವು. ದೇವದಾಸಿ ಮೇಳವಾದರೂ ಹಾಗೆಯೆ ಇದ್ದುದಷ್ಟೆ? ಆಗ ಭಕ್ತರು ದೇವರ ಸೇವಾರ್ಥ ಹರಕೆ ಆಟವನ್ನು (ಬೆಳಕು ಸೇವೆ) ದೇವಾಲಯಕ್ಕೆ ಹೋಗಿ ಆಡಿಸಬೇಕಿತ್ತು. ಉಳಿದ ಸೇವೆ, ಹರಕೆಗಳ ಹಾಗೆ ಇದೂ ಒಂದು ಸೇವೆ. ಈಗಲೂ ಈ ಪದ್ಧತಿ ಉತ್ತರ ಕನ್ನಡದಲ್ಲಿ ಗುಂಡಬಾಳಾ ಆಂಜನೇಯ ದೇವಾಲಯದಲ್ಲಿ ಇದ್ದು, (ಬೇರೆ ಒಂದೆರಡು ಕಡೆ ಕೂಡ) ಬೇಸಗೆಯಲ್ಲಿ ದೇವಾಲಯ ಮೇಳವು ಕ್ಷೇತ್ರದಲ್ಲಿ ಆಟಗಳನ್ನಾಡುತ್ತದೆ. ಇದೊಂದು ಹಿಂದಿನ ಪದ್ಧತಿಯ ಪಳೆಯುಳಿಕೆ. ಮೇಳಗಳು ಇರುವ ಬೇರೆ ದೇವಾಲಯ ಕ್ಷೇತ್ರಗಳಲ್ಲೂ ಹರಕೆ ಆಟದ ಸೇವಾದಾರರಿಗೆ ಸ್ವಂತ ಸ್ಥಳಾನುಕೂಲ ಇಲ್ಲವಾದರೆ, ಕ್ಷೇತ್ರದಲ್ಲಿ ಆಟ ಆಡಿಸುವ ಕ್ರಮವು ಈಗಲೂ ರೂಢಿಯಲ್ಲಿದೆ.
ಈಗಲಾದರೂ ಯಕ್ಷಗಾನದ ಕೆಲವು ಅಂಶಗಳು, ಇವುಗಳ ಆರಂಭದ ಪ್ರದರ್ಶನ ಸ್ಥಳವನ್ನು ಸೂಚಿಸುತ್ತದೆ. ಉದಾ: ತಿರುಗಿ ಕುಣಿಯುವ ತೆರೆ ಕುಣಿತ; ಕಿರೀಟವೇ ದೇವರಾಗಿ ಕಲ್ಪಿತವಾಗುವುದು. 'ಬಹು ಪರಾಕು' ಕ್ರಮ ಇತ್ಯಾದಿ. ಇದು ದೇವಾಲಯದ ಪರಿಸರದ ಉಳಿಕೆ.
ಕಾಲಕ್ರಮದಲ್ಲಿ ದೇವಾಲಯ ಆಡಳಿತಗಾರರ, ಭೂಮಾಲಿಕರ, ಭಜಕರ ಬೇಡಿಕೆಯಿಂದ ಹರಕೆದಾರನಿದ್ದಲ್ಲಿಗೆ ಮೇಳವು ಹೋಗುವ ವ್ಯವಸ್ಥೆ ಏರ್ಪಟ್ಟು, ಮೇಳದ ತಿರುಗಾಟವು ಆರಂಭವಾಗಿರಬೇಕು. ಹೀಗೆ ಕ್ಷೇತ್ರ ವಿಸ್ತಾರ, ಪ್ರೇಕ್ಷಕ ವಿಸ್ತಾರಗಳಿಗೆ ಕಾರಣವಾಯಿತು. ಪ್ರಾಯಃ ಭಾರತದಾದ್ಯಂತ ಇರುವ ಇತರ ಈ ಪ್ರಾಚೀನ ಸಾಂಪ್ರದಾಯಿಕ ರಂಗ ಪ್ರಕಾರಗಳೂ ಹೀಗೆಯೇ ಆಗಿವೆ.
ತಿರುಗಾಟವೆಂಬುದು ಆರಂಭವಾದಾಗ, ಸಂಘಟನಾತ್ಮಕವಾಗಿಯೂ, ಕಲಾದೃಷ್ಟಿಯಲ್ಲೂ ಪರಿವರ್ತನೆಗಳಾಗಿರಲೇಬೇಕಷ್ಟೇ?