ಈ ಪುಟವನ್ನು ಪ್ರಕಟಿಸಲಾಗಿದೆ
ಮುಡಿ
25

ಹೀಗೆ ದೇವಾಲಯದ ವಿದ್ವದ್ವಲಯದಲ್ಲಿ ರೂಪುಗೊಂಡ ಆಟವು, ಬಾಹ್ಯ ಪ್ರಯೋಗವಾಗುವಾಗ, ಅದು ಅಖಿಲ ಭಾರತೀಯ ಮತ್ತು ಪ್ರಾದೇಶಿಕ, ಶಿಷ್ಟ-ಸಾಮಾನ್ಯ, ಶಾಸ್ತ್ರೀಯ-ಜಾನಪದ, ಗ್ರಾಂಥಿಕ, ಮೌಖಿಕಗಳ ಸತತವಾದ ಸಂಘರ್ಷವನ್ನು, ಸಮ್ಮಿಶ್ರಣವನ್ನು ಮತ್ತು ಸಮನ್ವಯವನ್ನು ಸಾಧಿಸುತ್ತ ಬಂದಿದೆ. ಇದರ ಪದರುಗಳನ್ನು ಯಕ್ಷಗಾನ ಕಲಾಪ್ರದರ್ಶನದಲ್ಲಿ ಹಾಸುಹೊಕ್ಕಾಗಿ ಕಾಣುತ್ತೇವೆ ಆದರೂ — ಇದರ ಚೌಕಟ್ಟು ಶಿಷ್ಟ, ಕ್ಲಾಸಿಕಲ್ ಎಂದೇ ಸ್ಪಷ್ಟವಾಗಿದೆ.

ಬಯಲಾಟಗಳ ರೂಪೀಕರಣವು, ಮುಖ್ಯವಾಗಿ ವೈಷ್ಣವ ಭಾಗವತ ಸಂಪ್ರದಾಯದ ನಿಲುವಿನಲ್ಲಿ ಆಗಿದ್ದರೂ, ಭಾರತೀಯ ಪರಂಪರೆಯ ಮುಖ್ಯ ಭಾವನೆಗಳಲ್ಲಿ ಒಂದಾದ ಬಹುದೇವತಾ ಪ್ರಾಧಾನ್ಯವನ್ನು ಅದು ಆಚರಣಾಂಶದಲ್ಲೂ, ಪ್ರದರ್ಶನಗಳಲ್ಲೂ ಉಳಿಸಿ ಪ್ರಸಾರ ಮಾಡುತ್ತ ಬಂದಿದೆ. ಒಂದು ಕಥಾ ಪ್ರಸಂಗದಲ್ಲಿ ಓರ್ವ ದೇವರಿಗೆ ಮಹತ್ತ್ವವು ಬರುವುದಿದ್ದರೂ, 'ನಾನ್ಯ ನಿಂದಾ ನ್ಯಾಯ' (ಇತರರಿಗೆ ನಿಂದೆಯಲ್ಲ, ಒಂದು ವಿಷಯಕ್ಕೆ ಹೊಗಳಿಕೆ)ವೆಂಬ ದೃಷ್ಟಿಯಿಂದ ರೂಪಿತವಾಗಿದೆ. ಸಭಾಲಕ್ಷಣವೆಂಬ ಪೂರ್ವರಂಗದಲ್ಲಿ ಬಾಲಗೋಪಾಲ, ಗಣಪತಿ, ಸುಬ್ರಹ್ಮಣ್ಯ, ದೇವಿ, ಶಿವ (ಅರ್ಧನಾರೀಶ್ವರ) ಇವರೆಲ್ಲರಿಗೂ ಮಹತ್ತ್ವವುಂಟು. ಸಂದರ್ಭಾನುಸಾರವಾಗಿ, 'ಏಕದೇವತಾ ಪ್ರಧಾನ ಬಹುದೇವತಾವಾದವು', ಬಯಲಾಟಗಳ ಒಂದು ಹೆಗ್ಗುರುತು. ಇದರಲ್ಲಿ, ಸಂವಾದ ಪರವಾದ, ಬಹುತ್ವ ಕೇಂದ್ರಿತ ಮತೀಯ ಔದಾರ ದೃಷ್ಟಿಯು ಕೇಂದ್ರದಲ್ಲಿರುವುದು.

ಇಷ್ಟಲ್ಲದೆ, ರಂಗದಲ್ಲಿ ದೇವ ದೇವತೆಗಳು ಏಕಕಾಲದಲ್ಲಿ ದೇವರಾಗಿಯೂ, ಮನುಷ್ಯರಾಗಿಯೂ ವ್ಯವಹರಿಸುವುದರಿಂದ, ಒಂದು ಬಗೆಯ ಸಲುಗೆ, ಸಾಮಾಜಿಕರಿಗೂ ಸಾಧ್ಯವಾಗಿದೆ. ದೇವಾನುದೇವತೆಗಳನ್ನು ಹಾಸ್ಯಪಾತ್ರಗಳು, ಮುಲಾಜಿಲ್ಲದೆ ವಿನೋದ ಮಾಡುತ್ತವೆ. ಇದಿರು ಪಾತ್ರಗಳು ಖಂಡಿಸುತ್ತವೆ. ಮುಕ್ತ ಸಾಂಸ್ಕೃತಿಕ ಅಭಿವ್ಯಕ್ತಿಯನ್ನು, ತನ್ನೊಳಗಿನ ಒಂದು ಆಂತರಿಕ ಸೈದ್ದಾಂತಿಕತೆಯಾಗಿ ಬಯಲಾಟಗಳು ಬೆಳೆಸಿಕೊಂಡು ಬಂದಿವೆ. ಯಕ್ಷಗಾನದ ಈ ಬಗೆಯ ಅಭಿವ್ಯಕ್ತಿಯ ಬಗ್ಗೆ "ಧಾರ್ಮಿಕ ಸಂಕೇತಕ್ಕೆ ಅವಮಾನ" ಎಂಬ ರೀತಿಯ ಆಕ್ಷೇಪ ಈವರೆಗೆ ಬಂದಿರುವುದು ಬಹು ವಿರಳ.

ಆರಾಧ್ಯಗಳೂ, ಶ್ರದ್ಧೆಗೆ ಆಶ್ರಯಗಳೂ ಎನಿಸಿದ ರಾಮ, ಕೃಷ್ಣ, ಶಿವ, ದೇವಿ ಮೊದಲಾದ ಪಾತ್ರಗಳಿಗೆ ಸಹಪಾತ್ರಗಳಿಂದಲೂ, ವಿಶೇಷತಃ ಪ್ರತಿನಾಯಕ (ಇದಿರು ವೇಷ) ಪಾತ್ರಗಳಿಂದಲೂ ಬಲವಾದ ಸವಾಲುಗಳು, ಇಕ್ಕಟ್ಟುಗಳೂ ಬರುತ್ತವೆ. ಆಶು ಭಾಷಣವುಳ್ಳ

• ಡಾ. ಎಂ. ಪ್ರಭಾಕರ ಜೋಶಿ