ಈ ಪುಟವನ್ನು ಪ್ರಕಟಿಸಲಾಗಿದೆ
26
ಮುಡಿ

ಯಕ್ಷಗಾನದಲ್ಲಿ ಈ ವಿದ್ಯಮಾನವು ಹೆಜ್ಜೆಹೆಜ್ಜೆಗೂ ಸಂಭವ. ಹೀಗೆ — ಪುರಾಣ ರಚನೆ, ಪುರಾಣ ಭಂಜನ, ಆಕರ ಮಿಶ್ರಣಗಳು ಇಲ್ಲಿ ನಿತ್ಯ ವ್ಯವಹಾರವಾಗಿವೆ.

ಬಯಲಾಟಗಳ ಶೈಕ್ಷಣಿಕ ಮಹತ್ವದ ಕುರಿತು, ಅವು ಸಂಸ್ಕೃತಿ, ಮೌಲ್ಯ ಪ್ರಸಾರಗಳಲ್ಲಿ ಗೈದಿರುವ ಕಾರವನ್ನು ಕುರಿತು, ಬಹಳವಾಗಿ ಬೇರೆ ಬೇರೆ ಕಡೆ ಚರ್ಚಿತವಾಗಿರುವುದರಿಂದ ಇಲ್ಲಿ ಆ ಬಗೆಗೆ ಹೆಚ್ಚು ವಿಸ್ತರಿಸಿಲ್ಲ. "ಸಾಂಪ್ರದಾಯಿಕ ಮುಕ್ತ ವಿಶ್ವವಿದ್ಯಾಲಯ"[]ಧರ್ಮ ರೂಪಣದ ಜೊತೆಗೆ ಭಾಷಾ ಪರಿಜ್ಞಾನ, ವ್ಯವಹಾರ ಜ್ಞಾನ, ವಾಗಿತ್ವಗಳನ್ನು, ಭಾಷಾ ಕೌಶಲವನ್ನು ಬೆಳೆಸಿದೆ ಎಂಬುದನ್ನಷ್ಟೆ ಇಲ್ಲಿ ಪ್ರಸ್ತಾವಿಸಿದೆ. ಬದುಕಿನ ಬಗೆಯನ್ನೂ, ಬಗೆಯ ಬದುಕನ್ನೂ ಯಕ್ಷಗಾನವು ರೂಪಿಸಿದ ರೀತಿ, ನಮ್ಮ ಜನರ ದಿನನಿತ್ಯದ ವ್ಯವಹಾರದಲ್ಲಿ, ಆಡುಮಾತಿನಲ್ಲಿ, ವಾಗ್ರೂಢಿಗಳಲ್ಲಿ ಸುವ್ಯಕ್ತ.

ಪ್ರಾಯಃ ಆರಂಭದಲ್ಲಿ 'ರಾಮಕಥಾ ರಂಗ'ವಾಗಿ ರೂಪಿತವಾದ ಯಕ್ಷಗಾನವು[] ಆ ಬಳಿಕ, ಜನಾಪೇಕ್ಷೆಯಿಂದಾಗಿ ಮಹಾಭಾರತ, ಭಾಗವತಾದಿಗಳನ್ನು ಅಳವಡಿಸಿಕೊಂಡಿತು. (ಆದರೂ ಒಟ್ಟಿನಲ್ಲಿ ಬಹುಶಃ ೧೯೦೦ ತನಕ ಯಕ್ಷಗಾನವು ಆಕೃತಿಯಲ್ಲಿ ನಿಧಾನ ಪರಿಷ್ಕಾರವನ್ನು ಸಾಧಿಸುತ್ತ ಬಂದಿರಬಹುದಾದರೂ ರಚನೆ, ಸಾಹಿತ್ಯ, ಆಶಯಗಳು ದೊಡ್ಡ ಪಂಥಾಹ್ವಾನಗಳನ್ನು ಇದಿರಿಸಿದಂತಿಲ್ಲ. ೧೮೦೦-೧೯೦೦ ಅವಧಿಯಲ್ಲಿ ಕನ್ನಡ ಸಾಹಿತ್ಯದಲ್ಲಿ, ನಾಟಕರಂಗದಲ್ಲಿ ಕಾಣಿಸಿಕೊಂಡ ಹೊಸ ಒಲವುಗಳ ಪ್ರಭಾವವು ಈ ರಂಗದ ಮೇಲಾಯಿತು. ಶೇಕ್ಸ್‌ಪಿಯರ್‌ನ ನಾಟಕ 'ಏಸ್ ಯೂ ಲೈಕ್ ಇಟ್' ಆಧರಿಸಿ ಯಕ್ಷಗಾನ ಪ್ರಸಂಗ ರಚನೆ ಆಯಿತು.[] ಕವಿ ಮುದ್ದಣನ ರತ್ನಾವತಿ, ಕುಮಾರ ವಿಜಯ, ಮುಳಿಯ ತಿಮ್ಮಪ್ಪಯ್ಯನವರ ಸೂರ್ಯಕಾಂತಿ ಕಲ್ಯಾಣ, ವೆಂಕಣ್ಣ ಕವಿಯ ಮಾನಸ ಚರಿತ್ರೆ — ಇವುಗಳು ವಸ್ತು ನಾವೀನ್ಯ, ಛಂದೋನಾವೀನ್ಯದ ಮೊದಲ ಯತ್ನಗಳು. ಈ ಪರಂಪರೆ ಮುಂದೆ ವಿಸ್ತ್ರತವಾಗಿ ಬೆಳೆದಿದೆ.

ಎರಡು ಮಹಾಯುದ್ದಗಳ ಕಾಲವೆಂದು (Inter war Period) ರೂಢಿಯಾದ ೧೯೧೩-೧೯೪೫ರ ಅವಧಿಯಲ್ಲಿ ಜಗತ್ತಿನ ವಿವಿಧ ರಂಗಗಳಲ್ಲಿ ಬದಲಾವಣೆಗಳಾದ ಹಾಗೆ,


  1. • ದಿ. ಪ್ರೊ. ಎಸ್.ವಿ.ಪಿ. ಅವರ ನುಡಿ.
  2. • ಪೂಜೆಗಿಡುವ ಕಿರೀಟಗಳಿಗೆ ರಾಮಲಕ್ಷ್ಮಣ ಕಿರೀಟಗಳೆನ್ನುವರು. ಹಳೆಯ ಸಭಾಲಕ್ಷಣದ ಪ್ರತಿಗಳಲ್ಲಿ ರಾಮಾಯಣ ಪ್ರಸಂಗದ ಉಲ್ಲೇಖ ಸಿಕ್ಕಿರುವುದಾಗಿ ಡಾ. ಶಿವರಾಮ ಕಾರಂತರ ಉಲ್ಲೇಖ. ಪ್ರತಿದಿನವೂ ಪೂರ್ವರಂಗದಲ್ಲಿ ಶ್ರೀರಾಮನ ಒಡೋಲಗವು ಕಡ್ಡಾಯವಾಗಿತ್ತೆಂಬ ಕುಕ್ಕಿಲ ಕೃಷ್ಣಭಟ್ಟರ ಹೇಳಿಕೆ. ಕರ್ನಾಟಕದಾದ್ಯಂತ ಪಾರ್ತಿಸುಬ್ಬನ ರಾಮಾಯಣದ ಪ್ರಸಂಗಗಳ ನಿರಪವಾದ ಜನಪ್ರಿಯತೆ — ಇವು ಸೂಚನೆಗಳು.
  3. • ಡಾ. ಶ್ರೀನಿವಾಸ ಹಾವನೂರರ ಸಂಶೋಧನೆ.
• ಡಾ. ಎಂ. ಪ್ರಭಾಕರ ಜೋಶಿ