ಈ ಪುಟವನ್ನು ಪ್ರಕಟಿಸಲಾಗಿದೆ
30
ಮುಡಿ

ಕೇಳುವ ಆಯ್ದ ವರ್ಗಗಳ ಅಭಿರುಚಿ ಒಂದು ಕಡೆ, ಕಥಾ ಸ್ವಾರಸ್ಯ, ಬದಲಾವಣೆ, ತಿರುವುಓಟಗಳುಳ್ಳ ಕಥೆಯ ಆಸಕ್ತಿ, ಇವು ಇನ್ನೊಂದು ಕಡೆ, ಯಾವ ಅಭಿರುಚಿ ಸರಿ, ಎಂದು ನಿರ್ಣಯಿಸುವುದು ಸುಲಭವಲ್ಲ. ರಾಮಾಯಣಾದಿ ಆರ್ಷ ಪುರಾಣ, ಮತೀಯ-ಧಾರ್ಮಿಕ ವಸ್ತುಗಳಿಂದ, ಅಭಿರುಚಿಯು ಮತೇತರ ಲೌಕಿಕ ಕಥಾರೂಪಗಳ ಕಡೆ ಸಾಗಿದುದು, ಜಗತ್ತಿನ ಸಾಹಿತ್ಯ ಸಂಸ್ಕೃತಿ-ಚರಿತ್ರೆಗಳಲ್ಲಾದ ವಿದ್ಯಮಾನವಷ್ಟೆ? ಇದೇ ಪ್ರವೃತ್ತಿ ಇಲ್ಲೂ, ಸ್ಫೂರ್ತಿಯುತವಾಗಿ ನಡೆದಿದೆ. ಪ್ರಸಂಗಕರ್ತರನೇಕರು — ಯಕ್ಷಗಾನ ರಂಗದ ರೂಪ ಮತ್ತು ವಸ್ತು ನಾವೀನ್ಯಗಳನ್ನು ಚೆನ್ನಾಗಿ ಬೆಸೆಯಲು ಯತ್ನಿಸಿದ್ದಾರೆ. ಇವು ಕಲೆಯನ್ನು ಪ್ರಸ್ತುತಗೊಳಿಸುವ ಯತ್ನಗಳು.

ಕಳೆದ ಮೂರು ದಶಕದಲ್ಲಾದ ವೇಗದ ಆರ್ಥಿಕ, ಸಾಮಾಜಿಕ, ಪರಿವರ್ತನೆಗಳು ಇನ್ನೆರಡು ಒತ್ತಡಗಳನ್ನು ಈ ಕ್ಷೇತ್ರದ ಮೇಲೆ ತಂದಿವೆ — ಪ್ರದರ್ಶನದ ಕಾಲಮಿತಿಯ ಅವಶ್ಯಕತೆ ಮತ್ತು ಪ್ರಯೋಗರಂಗದ ಆವಿಷ್ಕಾರದ ಅಗತ್ಯ. ಇವೆರಡನ್ನೂ, ಒಂದು ಮಟ್ಟದಲ್ಲಿ ಯಕ್ಷಗಾನವು ನಿರ್ವಹಿಸಿದೆ.
ಕಾಲಮಿತಿ ಯಕ್ಷಗಾನ ಪ್ರದರ್ಶನಕ್ಕೆ ನೂರಾರು ವರ್ಷಗಳ ಚರಿತ್ರೆ ಇದೆ. (ಜಾತ್ರೆ ಉತ್ಸವಗಳ ಸಂದರ್ಭ, ಯಕ್ಷಗಾನ ನಾಟಕ, ಪ್ರದರ್ಶನ ಇತ್ಯಾದಿ) ಆದರೂ ಕಾಲಮಿತಿ ಪ್ರದರ್ಶನದ ಮೇಲೆ ಒತ್ತು ಬಿದ್ದುದು ಈಚೆಗೆ, ೧೯೮೦ರ ದಶಕದ ಕಮಲಶಿಲೆ ಮೇಳ, ಆ ಬಳಿಕ ಇಂದಿನವರೆಗೂ ಇಡಗುಂಜಿ ಮೇಳ, ಇವು ವ್ಯವಸಾಯ ಮೇಳದ ಮಟ್ಟದಲ್ಲಿ ಈ ಯತ್ನ ಮಾಡಿವೆ. ಶಾಲಾ ಕಾಲೇಜು ವಾರ್ಷಿಕೋತ್ಸವ, ಸಂಘಗಳ ಪ್ರದರ್ಶನ ಇತ್ಯಾದಿಗಳಲ್ಲಿ ಮಿತ ಅವಧಿ ಪ್ರದರ್ಶನಗಳಿವೆ. ಮಿತ ಅವಧಿಯ ಪ್ರದರ್ಶನವು ಈಗ ಸ್ಥಾಪಿತ ಕ್ರಮವಾಗಿ ಜನಪ್ರಿಯವಾಗಿದೆ.
ಪ್ರದರ್ಶನದ ಕಾಲಮಿತಿಯು, ಕಾಲದ ಕರೆ, ಇದು ಅನಿವಾರ್ಯ ಮಾತ್ರವಲ್ಲ, ಗುಣವೃದ್ಧಿಗೂ ಅಗತ್ಯ. ಯಕ್ಷಗಾನದೊಳಗಿನ ಕಲಾಸಾಮಾಗ್ರಿಯನ್ನು ಪುನರಾವೃತ್ತಿ ಇಲ್ಲದೆ ಅಳವಡಿಸಿದರೆ, ಮೂರು ಗಂಟೆಗಳಲ್ಲಿ ಚೆನ್ನಾಗಿ ತೋರಿಸಬಹುದು. ಪ್ರದರ್ಶನದ ಬಿಗಿ ಸಾಧಿಸಲು ನಿರ್ದಾಕ್ಷಿಣ್ಯ ಕತ್ತರಿ ಪ್ರಯೋಗವು ಅನಿವಾರ್ಯ .
ಬದಲಾದ ಆರ್ಥಿಕತೆ, ಹೆಚ್ಚಿದ ಪ್ರಯಾಣ ಸೌಕರ್ಯ, ವ್ಯಸ್ತತೆ (Being busy) ಅವಸರದ ಸ್ವಭಾವ, ವಿಭಕ್ತ ಕುಟುಂಬಗಳ ಆಧಿಕ್ಯ, ನಗರೀಕರಣ, ಎಲ್ಲರೂ ದುಡಿಯುವ

* ಡಾ. ಎಂ. ಪ್ರಭಾಕರ ಜೋಶಿ