ಈ ಪುಟವನ್ನು ಪ್ರಕಟಿಸಲಾಗಿದೆ
ಮುಡಿ
31

ಅನಿವಾರ್ಯತೆ, ನಿಧಾನಗತಿಯ ಗ್ರಾಮೀಣ ಜೀವನ ಶೈಲಿ ಅಪ್ರಸ್ತುತವಾಗಿರುವುದು, ಭದ್ರತಾ ಸ್ಥಿತಿಯ ಅಭದ್ರತೆ - ಇವುಗಳಿಂದ, ಕಲಾತ್ಮಕ ಪುನರಾಚನೆಯ ದೃಷ್ಟಿಯಿಂದಲೂ - ಮಿತಕಾಲಿಕ ಪ್ರದರ್ಶನ ಅತಿ ಅಗತ್ಯವಿದೆ. ಕ್ಯಾಸೆಟ್, ವಿಡಿಯೋ, ಸೀಡಿ ಯುಗವೂ ಅದನ್ನು ಅಗತ್ಯವಾಗಿಸಿದೆ. ಪ್ರಯೋಗರಂಗ ನಿರ್ಮಾಣವೂ ಯಕ್ಷಗಾನದಲ್ಲಾಗಿದ್ದು - ಡಾ| ಶಿವರಾಮ ಕಾರಂತರ ಯಕ್ಷರಂಗ, ಉದ್ಯಾವರ ಮಾಧವಾಚಾರ್ಯರ ಸಮೂಹ, ಮಂಟಪ ಉಪಾಧ್ಯ - ಆರ್. ಗಣೇಶ್‌ರ ಏಕವ್ಯಕ್ತಿ - ಯುಗಳ ಯಕ್ಷಗಾನ, ಗಾನ ತಾಳಮದ್ದಲೆ, ಕಾವ್ಯ ತಾಳಮದ್ದಲೆ, ಏಕವ್ಯಕ್ತಿ ತಾಳಮದ್ದಲೆ, ದೃಶ್ಯಾವಳಿ ಪ್ರದರ್ಶನ - ಹೀಗೆ ಹಲವು ಮುಖಗಳಲ್ಲಿ ಪ್ರಯೋಗರಂಗವು ಸಾಗಿದೆ. ಮಹಿಳಾ ಯಕ್ಷಗಾನವು ಇನ್ನೊಂದು ಮಹತ್ವದ ಕವಲು. ಅನ್ಯಭಾಷಾ ಯಕ್ಷಗಾನಗಳು (ಹಿಂದಿ, ಇಂಗ್ಲಿಷ್, ಕೊಂಕಣಿ, ಮಲಯಾಳಂ, ಮರಾಠಿ ಇತ್ಯಾದಿ) ವಿಸ್ತರಣೆಯ ಯತ್ನಗಳಾಗಿ ಬಂದಿವೆ. ಸಾಲಿಗ್ರಾಮ, ಇರಾ, ಇಡಗುಂಜಿ ಮೇಳಗಳು ಪ್ರಯೋಗರಂಗ ಮತ್ತು ಪ್ರಧಾನರಂಗಗಳನ್ನು ಸಂಯೋಜಿಸಲು ಯತ್ನಿಸಿವೆ.

೧೦

ಇಂದು ನಮ್ಮ ಯಕ್ಷಗಾನವು, ಅಂತೆಯೆ ಒಟ್ಟು ಜನಪದ ರಂಗಭೂಮಿಯೂ, ಆಧುನಿಕತೆಯ ಮಧ್ಯೆ ಅರ್ಥಪೂರ್ಣವಾಗಿ, ಗೌರವಯುತವಾಗಿ ಮತ್ತು ತನ್ನ ಗುರುತನ್ನಿರಿಸಿಕೊಂಡು ಬಾಳಬೇಕಾಗಿದ್ದು ಇದಕ್ಕೆ - ಕಲಾವಿದ, ಸಂಘಟಕ, ಪೋಷಕ, ಪ್ರೇಕ್ಷಕ, ಕಲಾಚಿಂತಕ, ಪ್ರಸಾರಕ, ಪ್ರಸಂಗಕರ್ತ - ಎಂಬ ಸಪ್ತಮಾತೃಕೆಯರ ರಕ್ತದಾನ ಅಗತ್ಯ. ನಾವೀನ್ಯ ಮತ್ತು ಶೈಲಿ, ಜನಾಪೇಕ್ಷೆ ಮತ್ತು ಕಲಾಪೇಕ್ಷೆ, ಪರಿಷ್ಕಾರ ಮತ್ತು ಐಡೆಂಟಿಟಿ, ಪರಂಪರೆ ಹಾಗೂ ನೂತನ ಸಾಮಾಜಿಕ ಸಂದರ್ಭ, ಆಶು ಮತ್ತು ನಿಯಂತ್ರಣ - ಹೀಗೆ ಈ ರಂಗದೊಳಗೆ ಹಲವು ಸೆಳೆತಗಳ ಸಂಘರ್ಷವಿದ್ದು, ಅದನ್ನು ಸಮನ್ವಯವಾಗಿಸಿ ರೂಪಿಸುವ ದೊಡ್ಡ ಹೊಣೆ ಈ ಕಾಲದ ಮೇಲಿದೆ. ಇಲ್ಲವಾದರೆ, ಶತಮಾನಗಳಿಂದ ಬಂದಿರುವ ಒಂದು ಸುಂದರ, ಸಮೃದ್ದ, ಶೈಲೀಕೃತ ಕಲೆಯನ್ನು ವಿನಾಶ ಮಾಡಿದ ಹೊಣೆ ನಮ್ಮ ಮೇಲೆ ಬರುತ್ತದೆ.

ಯಕ್ಷಗಾನ ಮತ್ತಿತರ ಪಾರಂಪರಿಕ ಕಲೆಗಳ ಸಮಸ್ಯೆಗಳನ್ನೆಲ್ಲ ಒಂದೇ ಮಾತಿನಲ್ಲಿ ಹೇಳುವುದಾದರೆ - ಅದು ಅಸಮತೋಲನ ಸಮಸ್ಯೆ, ಹಿಮ್ಮೇಳ-ಮುಮ್ಮೇಳ, ಕಥೆ-ಪ್ರಸಂಗಗಳ, ಪಾತ್ರ-ಪಾತ್ರ, ನೃತ್ಯ-ಸಾಮೂಹಿಕತೆ, ಅಭಿನಯ-ಔಚಿತ್ಯ, ಶೈಲಿ ಮತ್ತು ನಾವೀನ್ಯ, ಕಾಲ ಮತ್ತು ಸಮಯ ಪಾಲನೆಗಳ ಮಧ್ಯೆ, ಸಂಘರ್ಷಗಳಿವೆ. ವೈಯಕ್ತಿಕತೆ ಮತ್ತು ಮೇಳ ಇವುಗಳಲ್ಲಿ ಅಸಮತೋಲನವಿದೆ. ರಂಗ ವ್ಯವಹಾರ, ರಂಗನಡೆಗಳಲ್ಲಿ ವಾಸ್ತವ ಸಾಮಾಜಿಕತೆ ಮತ್ತು ಅನುಚಿತ ಗೋಷ್ವಾರಿಗಳ ಪ್ರವೇಶವಾಗಿದೆ.

* ಡಾ. ಎಂ. ಪ್ರಭಾಕರ ಜೋಶಿ