ಈ ಪುಟವನ್ನು ಪ್ರಕಟಿಸಲಾಗಿದೆ
38

ಮುಡಿ

ಪ್ರಶ್ನೆ : ನೃತ್ಯ, ಹಾಡು, ಆಹಾರಗಳಲ್ಲಿ ಡಾ| ಕಾರಂತರು ನಡೆಸಿದ ಪ್ರಯೋಗಗಳನ್ನು ನಾವು ಯಾಕೆ ಮುಂದುವರಿಸಬಾರದು ? ಪ್ರಯೋಗರಂಗ ಮತ್ತು ಕಾಲಮಿತಿ ವಿಚಾರದಲ್ಲಿ ಪ್ರವೃತ್ತಿಪರ ಹವ್ಯಾಸಿಗಳಿಗೇ ಹೆಚ್ಚು ಸಾಧ್ಯವೇನೋ ?
ಉತ್ತರ : ಹೌದು. ಡಾ| ಕಾರಂತರ ದಾರಿಯಲ್ಲೂ, ಅದಕ್ಕಿಂತ ಭಿನ್ನವಾಗಿಯೂ ಪ್ರಯೋಗರಂಗ ಬೆಳೆಸಬಹುದು. ಪ್ರಧಾನರಂಗ, ಪ್ರಯೋಗರಂಗ ಇವೆರಡೂ ಪೂರಕವಾಗಿ ಅರ್ಥಪೂರ್ಣ ವ್ಯತ್ಯಾಸಗಳಿಂದ ಕೂಡಿ ಸಾಗಬೇಕು. ಆಗ ಒಟ್ಟು ಕಲೆ ಶ್ರೀಮಂತಗೊಳ್ಳುತ್ತದೆ. ಇಂತಹ ಪ್ರಯತ್ನಗಳಿಗೆ ನನ್ನ ಸಹಕಾರವಿದೆ.
ಪ್ರಶ್ನೆ : ಯಕ್ಷಗಾನದಲ್ಲಿ ಬಡಗಣ ತಿಟ್ಟು, ತೆಂಕಣ ತಿಟ್ಟು ಎಂದು ಇದೆ. ಈ ವ್ಯತ್ಯಾಸಗಳಿಗೆ ಕಾರಣವೇನು ? ಇದಕ್ಕೆ ಶಾಸ್ತ್ರೀಯತೆ ಇದೆಯೆ ?
ಉತ್ತರ : ಹೌದು, ಪ್ರಾದೇಶಿಕ ವ್ಯತ್ಯಾಸ ಹೆಚ್ಚಿನ ಪಾರಂಪರಿಕ ಕಲೆಗಳಲ್ಲಿ ತಿಟ್ಟುಗಳಾಗಿ, ಒಳ ಪ್ರಭೇದ ಶೈಲಿಗಳಾಗಿ (Style, Regional Variation) ಆಗಿ ಇವೆ. ಇದರ ಮೂಲವು ಐತಿಹಾಸಿಕ ಶೋಧನೆಗೆ ವಿಚಾರ. ಬಹುಶಃ ಕ್ರಿ.ಶ. ೧೬೦೦ರ ಸುಮಾರಿಗೇ ತೆಂಕು, ಬಡಗು ಎಂಬ ಪ್ರತ್ಯೇಕ ತಿಟ್ಟುಗಳಾಗಿರಬಹುದು. ಆಂಧ್ರದ ಯಕ್ಷಗಾನಗಳಲ್ಲಿ ಅಂದರೆ, ಪ್ರದರ್ಶನ ರೂಪಗಳಲ್ಲಿ ಹತ್ತಾರು ಪ್ರಭೇದಗಳಿವೆ. ಯಕ್ಷಗಾನದ ಸ್ಥೂಲರೂಪ ಶಾಸ್ತ್ರೀಯವೇ ಆಗಿದೆ. ಶೈಲಿ ಪ್ರಭೇದವನ್ನು ಶಾಸ್ತ್ರವೂ ಮನ್ನಿಸುತ್ತದೆ. ಸಂಗೀತ ಮೊದಲಾದ ಕಲೆಗಳನ್ನು ಗಮನಿಸಿರಿ.
ಪ್ರಶ್ನೆ : ಉತ್ತರ ಕರ್ನಾಟಕದ ಜಾನಪದ ಇಲ್ಲಿಯೂ ಜನಪ್ರಿಯವಾಗಿದೆ. ಇತ್ತಲಿನ ಯಕ್ಷಗಾನ ಆ ಕಡೆ ಹೆಚ್ಚು ಬಂದಂತಿಲ್ಲ. ಆ ಕಡೆ ಪ್ರದರ್ಶನ ನೀಡಿದರೆ ಒಳ್ಳೆಯ ಬೆಳವಣಿಗೆ ಆದೀತಲ್ಲವೇ?

- ಡಿ. ಪ್ರವೀಣ, ಕರ್ನಾಟಕ ಕಾಲೇಜು, ಧಾರವಾಡ

ಉತ್ತರ : ಹೌದು, ಹಲವು ಪ್ರದರ್ಶನಗಳಾಗಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ನೀವು ಧ್ವನಿಸಿದ ಹಾಗೆ, ಒಂದು ಅಭಿಯಾನವಾಗಿ ಅದು ಆಗಬೇಕು. ಈ ಬಗೆಗೆ ಒಂದು ಪ್ರಯತ್ನ ಈ ವರ್ಷವೇ ನಡೆಯಲಿದೆ.
ಪ್ರಶ್ನೆ : ವೀರಪ್ಪನ್‌ನಂತಹ ನರಹಂತಕನನ್ನೂ ಚಿತ್ರಿಸಿದ ಯಕ್ಷಗಾನವು ಗಾಂಧೀಜಿ, ಸುಭಾಷ್, ಭಗತ್‌ಸಿಂಗರನ್ನು ಚಿತ್ರಿಸಲು ಹಿಂದುಳಿದುದು ಸರಿಯೆ ? - ಸಂದೀಪ ಶೆಟ್ಟಿ, ಕೋಟೇಶ್ವರ
ಉತ್ತರ : ವಾಣಿಜ್ಯಪರತೆಗಾಗಿ, ಏನೇನೋ ಪ್ರಸಂಗಗಳು ಬಂದರೆ, ಅದು ಬೆಳವಣಿಗೆಯಲ್ಲ, ಯಕ್ಷಗಾನದಂತಹ ಒಂದು ರಮ್ಯ ಕಲ್ಪನಾತ್ಮಕ ಕಲೆಗೆ ಹೊಂದುವ ವಸ್ತು ಯಾವುದೆಂಬ

ಬಗೆಗೆ ಬಹಳ ಎಚ್ಚರಿಕೆಯ ಆಯ್ಕೆ ಮುಖ್ಯ.

* ಡಾ. ಎಂ. ಪ್ರಭಾಕರ ಜೋಶಿ