ಈ ಪುಟವನ್ನು ಪ್ರಕಟಿಸಲಾಗಿದೆ
ಮುಡಿ
37

ಒಳಗಾದಾಗ, ಈ ಸಮಸ್ಯೆ ಬರುತ್ತದೆ. ಕಳಪೆತನಕ್ಕೂ ಕಾರಣವಾಗುತ್ತದೆ. ಹೊಸ ಪ್ರಸಂಗವೆಂಬುದೇ ತಪ್ಪೇನಲ್ಲ. ಅದು ಸಶಕ್ತವಾಗಿದ್ದು, ಕಲೆಯ ಸ್ವರೂಪಕ್ಕೆ ಹೊಂದಿಕೊಂಡು ರಚಿತವಾಗಿ ಅದೇ ನಿಯಮದಿಂದ ರಂಗಕ್ಕೆ ಬಂದರೆ ಚೆಂದ.

ಪ್ರಶ್ನೆ : ಭಾಷೆ ಒಂದು ಸಂವಹನ ಮಾಧ್ಯಮ.ಇಂಗ್ಲೀಷಿನಲ್ಲಿ ಯಕ್ಷಗಾನಗಳಾಗಿವೆ. ಹಾಗಿರುವಾಗ ನಮ್ಮ ಜನಪದರ ಭಾಷೆಯಲ್ಲಿ ತುಳುವಿನಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಏಕೆ ಆಕ್ಷೇಪ ಹೇಳಬೇಕು ? ಅದೂ ಪೂರಕವಲ್ಲವೆ?

-ಭುವನಪ್ರಸಾದ ಹೆಗ್ಡೆ

ಉತ್ತರ : ಹೌದು. ಹಾಗೆಂದೇ ನನ್ನ ಈ ಪ್ರಬಂಧದಲ್ಲೂ, ಇತರ ಲೇಖನಗಳಲ್ಲೂ ಹೇಳಿದ್ದೇನೆ. ತುಳುವು ತುಳುನಾಡಿನ ಪ್ರಧಾನ ಭಾಷೆ, ಕನ್ನಡದಲ್ಲಿ ಯಕ್ಷಗಾನ ಇರುವಂತೆ, ತುಳುವಿನಲ್ಲೂ ಇರಬಹುದು. ಇರಬೇಕು. ಆದರೆ ಅದು ಯಕ್ಷಗಾನವಾಗಿ ಇರಬೇಕು. ಕಲೆಯ ವಿಘಟನೆ, ಉಧ್ವಸ್ತತೆಗೆ ಕಾರಣವಾಗಬಾರದು. ತುಳು ಯಕ್ಷಗಾನವೆಂಬುದು ಮೂಲತಃ ಜನ ಪರವಾದ ಬೆಳವಣಿಗೆ, ಅದರ ವ್ಯವಸ್ಥಿತ ಪುನಾರಚನೆ ಅಗತ್ಯ.

ಪ್ರಶ್ನೆ : ನೀವು ಸವಾಲುಗಳನ್ನು ಗೊತ್ತಿರುವಂತಹದನ್ನೇ ಹೇಳಿದಿರಿ. ಪರಿಹಾರ ಹೇಳಲಿಲ್ಲ.

- ಯಕ್ಷಗಾನ ಪ್ರೇಮಿ

ಉತ್ತರ : ಇಲ್ಲ, ಗೊತ್ತಿರುವುದನ್ನೇ ವ್ಯವಸ್ಥೆಗೊಳಪಡಿಸಿ, ಐತಿಹಾಸಿಕ ವಿಶ್ಲೇಷಣೆಯೊಂದಿಗೆ ಹೇಳಿದ್ದೇನೆ. ಇರುವ ವಿಷಯವನ್ನು ವ್ಯವಸ್ಥೆ ಮಾಡಿ ಹೇಳುವುದೂ ಅಧ್ಯಯನದ ಮುಖ್ಯ ಭಾಗವೇ. ಎಲ್ಲಾ ಶಾಸ್ತ್ರಗಳು ಹಾಗೆಯೆ, ಹೊಸ ವಿಷಯಗಳನ್ನೂ ಹೇಳಿದ್ದೇನೆ. ಸವಾಲುಗಳಿಗೆ ಸಿದ್ಧ (ರೆಡಿಮೇಡ್) ಪರಿಹಾರಗಳಿಲ್ಲ. ಕಂಡುಕೊಳ್ಳಲು ಸಾಧ್ಯ. ಅಂತಹ ಸ್ಕೂಲವಾದ ಮಾರ್ಗವನ್ನು ಪ್ರಸ್ತಾವಿಸಿದ್ದೇನೆ.

ಪ್ರಶ್ನೆ : ಯಕ್ಷಗಾನದಲ್ಲಿ ಪುರಾಣದ ಪಾತ್ರಗಳ ಅಭಿವ್ಯಕ್ತಿಗೊಳ್ಳುವ ಬಗೆ ಮತ್ತು ಪುರಾಣ ಭಂಜನೆ ಯಾವ ನೆಲೆಯಲ್ಲಿ?

-ಶ್ರೀನಿಧಿ, ಪುತ್ತೂರು

ಉತ್ತರ : ಯಕ್ಷಗಾನದ ಕಲಾವ್ಯಾಕರಣವು ಸಿದ್ಧ ಮಾದರಿ. ಆದರೆ, ಅಭಿವ್ಯಕ್ತಿಯಲ್ಲಿ ಅಪಾರ ಸ್ವಾತಂತ್ರ್ಯವಿದೆ. ಒಂದು ಪಾತ್ರ - ಕೃಷ್ಣ, ರಾಮ, ಕರ್ಣ - ಯಾವುದೇ ಇರಲಿ, ಒಬ್ಬೊಬ್ಬ

ಕಲಾವಿದನದೂ ಬೇರೆ. ಒಬ್ಬನದೇ ಬೇರೆ ಬೇರೆ. ಆಶುಭಾಷಣ, ಕಲ್ಪನೆಗಳಿರುವ ಮಾತುಗಾರಿಕೆಯಲ್ಲಿ ಪುರಾಣ ಸೃಷ್ಟಿ, ಪುರಾಣ ಭಂಜನ ಎರಡೂ ಬಹಳಷ್ಟು ನಡೆಯುತ್ತದೆ. ಹಾಸ್ಯಗಾರನು ದೇವ, ದಾನವ, ರಾಜ, ರಾಣಿ ಎಲ್ಲರನ್ನೂ ತಮಾಷೆ ಮಾಡುತ್ತಾನೆ. ವಿರೋಧಿ ಪಾತ್ರಗಳು, ಸಹ ಪಾತ್ರಗಳು, ಆದರ್ಶ ಪಾತ್ರ ಅಥವಾ ವಿರುದ್ಧ ಪಾತ್ರಗಳ ಮೇಲೆ ಬಲವಾದ ಸವಾಲುಗಳನ್ನು ಒಡ್ಡುತ್ತವೆ. ಈ ಬಗೆಯ ಅಸಾಧಾರಣ ಕಲಾ ಸಿದ್ಧಿಯನ್ನು, ಸೃಜನಶೀಲ ಮಾದರಿಗಳನ್ನು ಶ್ರೀ ಶೇಣಿಯವರ ಅರ್ಥಗಾರಿಕೆಯಲ್ಲಿ ಕಂಡಿದ್ದೇವೆ.

* ಡಾ. ಎಂ. ಪ್ರಭಾಕರ ಜೋಶಿ