ಈ ಪುಟವನ್ನು ಪ್ರಕಟಿಸಲಾಗಿದೆ
ಮುಡಿ
49

ಕಲೆಗಳಲ್ಲಿ ರೂಪಪ್ರಧಾನ ಮತ್ತು ಆಶಯ ಪ್ರಧಾನ ಎಂದು ಎರಡು ಬಗೆ. ಶಾಸ್ತ್ರೀಯ ಸಂಗೀತವು ರೂಪ ಪ್ರಧಾನ. ಅಂದರೆ, ಹಾಡುವ ಗೀತವು ಏನು ಹೇಳುತ್ತವೆ ಎಂಬುದಕ್ಕೆ ಅಷ್ಟು ಮಹತ್ವವಿಲ್ಲ. ಕಲಾರೂಪಕ್ಕೆ ಅರ್ಥಾತ್ ಸ್ವರ ವಿನ್ಯಾಸ, ಲಯ, ಶೈಲಿಗಳಿಗೆ ಹೆಚ್ಚು ಪ್ರಾಧಾನ್ಯ, ಆಧುನಿಕ ರಂಗಭೂಮಿಯ ನಾಟಕವು ಆಶಯ ಪ್ರಧಾನ. ಅರ್ಥಾತ್ ಅದರ ಕತೆ, ನಡೆ, ರಚನೆ, ಭಾಷೆ, ವಿಷಯಗಳು ಮುಖ್ಯ ಮತ್ತು ಪ್ರೇಕ್ಷಕರಿಗೆ ಅವು ಪ್ರಸ್ತುತ, ಅಲ್ಲಿನ ಸಂಗತಿಗಳಿಗೆ ನೇರವಾಗಿ ಬದುಕಿನ ಅನ್ವಯಿಕತೆ ಇದೆ. ಅಂದರೆ ಇಲ್ಲಿ ನಾಟಕವೆಂಬ ಪ್ರದರ್ಶನ ಕಲೆ ತಾನು ಹೇಳಬೇಕಾದುದನ್ನು ಹೇಗೆ ಹೇಳಿದೆ ಎಂಬುದು ಒಂದು ಹಂತದಲ್ಲಿ ಮುಖ್ಯವಾದರೂ, ಏನು ಹೇಳಿದೆ ಎಂಬುದೇ ಕೊನೆಗೂ ಹೆಚ್ಚು ಪ್ರಾಧಾನ್ಯಗಳಿಸುತ್ತದೆ.
ಯಕ್ಷಗಾನ ಕಲೆಯ ನೆಲೆಯಲ್ಲಿ ಈ ವಿಚಾರಗಳನ್ನು ಭಾವಿಸಿದರೆ ಈ ಕಲೆಯು ರೂಪ ಪ್ರಧಾನವೋ, ಆಶಯ ಪ್ರಧಾನವೋ ಎಂಬ ಪ್ರಶ್ನೆ. ಒಂದು ಮಟ್ಟದಲ್ಲಿ ನೋಡಿದಾಗ ಇದು ರೂಪಪ್ರಧಾನ ಕಲೆ- ಅಂದರೆ ಅದರ ಗಾನ, ನರ್ತನಾದಿ ಘಟಕಗಳು, ಅವುಗಳ ಶೈಲಿಯ ರೂಪ [form]ವೇ ಮುಖ್ಯ. ಆದರೆ ವಿಷಯ ಅಷ್ಟು ಸರಳವಲ್ಲ ; ಯಕ್ಷಗಾನ ಎಂಬ ಕಾವ್ಯವು ಮತ್ತು ಅದರ ಪ್ರದರ್ಶನವು ಹೇಳುವ, ಪ್ರತಿಪಾದಿಸುವ ವಸ್ತು, ವಿಷಯ, ಮೌಲ್ಯಗಳೂ,ಮುಖ್ಯವೇ. ಹಾಗೆಂದು ಅವುಗಳು ಆ ಕಲೆಯ ರೂಪದಿಂದಲೇ ಪ್ರದರ್ಶಿತವಾಗದಿದ್ದರೆ ಅದು ಯಕ್ಷಗಾನವಾಗುವುದಿಲ್ಲ. ಅಂದರೆ ಯಕ್ಷಗಾನವು ಉಭಯ ಪ್ರಧಾನ. ಆದರೆ, ರೂಪಾಧಿಷ್ಠಿತ ಕಲೆ, ಅಂದರೆ ಯಕ್ಷಗಾನವು ಶೈಲಿಬದ್ಧವಾಗಿರಬೇಕು ಮತ್ತು ಅಷ್ಟೇ ಆಗಿರದೆ, ವಸ್ತು ಪ್ರಧಾನವೂ ಆಗಿರಬೇಕು. ಬೇರೊಂದು ರೀತಿಯಲ್ಲಿ ಹೇಳುವುದಾದರೆ ಯಕ್ಷಗಾನ ಅಂತೆಯೇ ಕಥಕಳಿ, ತೆರುಕೂತ್ತು, ವೀಥಿ ನಾಟಕಂನಂತಹ ಪ್ರಕಾರಗಳು ಸಾರ್ಥಕವಾಗುವುದು, ಅವು ಯಾವುದನ್ನಾದರೂ ಅವುಗಳಾಗಿದ್ದು ಹೇಳಿದಾಗ ಮಾತ್ರ. ಅವು ಬೇರೇನೊ ಆಗಿ, ಎಷ್ಟು ಚೆನ್ನಾಗಿದ್ದರೂ ಆ ಸ್ಥಿತಿ ಪ್ರಶಂಸನೀಯವಲ್ಲ. ಯಕ್ಷಗಾನವು ಶೈಲಿಬದ್ಧ ಮತ್ತು ಶೈಲೀಕೃತ ಕಲೆ. ಅದೇ ಅದರ ಸ್ವತ್ವ; ಆ ಸ್ವತ್ವವೇ ಅದರ ಸತ್ತ್ವಕ್ಕೆ ಆಧಾರ ಭೂಮಿ.

ಏನೂ ಆ ಸ್ವತ್ವ, ತನ್ನತನ ? ಅದು ಅದರ ಸ್ವರೂಪ, ಸ್ವ-ರೂಪ, ಇದೇ 'ಮಾರ್ಗ',ದಾರಿ, ಇದು ನೂರಾರು ವರ್ಷಗಳ ಕಾಲ ಒಂದು ಕಲೆಯು ಬೆಳೆಯುತ್ತಾ ಗಳಿಸಿಕೊಂಡ ಪರಂಪರೆ, ಅಂದರೆ ಉತ್ತರೋತ್ತರವಾದ ಗಳಿಕೆಗಳ ಸಂಗ್ರಹ; ಪದರು ಪದರುಗಳ ವಿನ್ಯಾಸ. ಈ ವಿನ್ಯಾಸವು ಹಲವು ಕಾಲಗಳ, ತಲೆಮಾರುಗಳ ಕೊಡುಗೆಗಳ ಫಲಿತವಾಗಿರುತ್ತದೆ. ಅರ್ಥಾತ್ ಪರಂಪರೆ ಎಂಬುದು ಹಲವು ಹಂತಗಳನ್ನು ದಾಟಿ ಬಂದ ಪ್ರವಾಹದ ಒಂದು ಹಂತ- ಇದು ಏಕಾತ್ಮವೂ ಹೌದು. ಬಹುತ್ವವುಳ್ಳದ್ದೂ ಹೌದು. ಹಾಗೆಂದು ಅದು ವಿಕೃತಿಯಲ್ಲ, ಸಂಸ್ಕೃತಿ,

* ಡಾ. ಎಂ. ಪ್ರಭಾಕರ ಜೋಶಿ