ಈ ಪುಟವನ್ನು ಪ್ರಕಟಿಸಲಾಗಿದೆ

ಮುಡಿ

57

ಭಾಗ, ರಂಗದ ಪ್ರದರ್ಶನವು ಅವನಲ್ಲಿ ಒಂದು ಪಾಠವನ್ನು ನಿರ್ಮಿಸುತ್ತದೆ, ಅವನಲ್ಲಿ ಒಂದು ಅರ್ಥೈಸುವಿಕೆ ನಿರ್ಮಾಣವಾಗುತ್ತದೆ, ಪ್ರದರ್ಶನದ ಮಾನಸಿಕ ಚಿತ್ರ ಉಂಟಾಗುತ್ತದೆ. ಅಂದರೆ ಪ್ರದರ್ಶನ ರೂಪವು (ಅಂದರೆ ಅದರ ವಿವರ, ಭಾವ, ಅರ್ಥ) ರಂಗಸ್ಥಳಕ್ಕೆ ಸೀಮಿತವಲ್ಲ. ಅದು ರಂಗದ ಹೊರಗೆ ಚಾಚಿ, ಪ್ರೇಕ್ಷಕರನ್ನು ಸೇರಿ, ಅಲ್ಲಿಂದ ಮುಂದೆ ಬೆಳೆಯುತ್ತದೆ.


ಪ್ರಸಂಗ + ಸಂಗೀತ = ㅤㅤ + ಅರ್ಥ +ನಾಟ್ಯ+ ರಂಗಚಲನೆ =ㅤㅤㅤㅤㅤㅤ ಪ್ರೇಕ್ಷಕ ↑ ↑ ↑ ↑


ಹೀಗೆ ಸಾಗುತ್ತ, ಮೀರುತ್ತ ಪ್ರಸಂಗ -ಪ್ರದರ್ಶನ ಸಂಬಂಧ ಇದೆ.
ಪ್ರೇಕ್ಷಕನಿಗೆ ತಲಪಿದ ಪ್ರದರ್ಶನವನ್ನು ಆತನು ಸವಿಯುವಾಗ, ವಿಮರ್ಶಿಸುವಾಗ ಮತ್ತು ಅದನ್ನು ನೆನಪಿಸುವಾಗ, ಹಂಚಿಕೊಳ್ಳುವಾಗ ರಂಗದಲ್ಲಿ ನಡೆದುದನ್ನೇ ಯಥಾವತ್ ಹೇಳುವುದಿಲ್ಲ. ಅದರಲ್ಲಿ ಆತನ ಕಾಣುವಿಕೆ, ಅರ್ಥೈಸುವಿಕೆಗಳು ಇರುತ್ತವೆ. ಆಟವೊಂದನ್ನು ಕಂಡವರು, ಮತ್ತೊಂದು ಬಾರಿ ಅದನ್ನು ಚರ್ಚಿಸುವಾಗ, ಅದು ಹಾಗಲ್ಲ ಹೀಗೆ, ಅವರು ಹಾಗೆ ಹೇಳಿದ್ದರ ಅರ್ಥ ಹೀಗೆ, ಇಂತಹ ನಟನೆಗೆ ಅರ್ಥ ಇದು, ಅಥವಾ ಇದಲ್ಲ, ಮತ್ತೊಂದು - ಎಂಬಂತೆ ಮಾತಾಡುವುದನ್ನು ಕಂಡಾಗ ಈ ವಿಚಾರ ಸ್ಪಷ್ಟವಾಗುತ್ತದೆ. ಅದೇ ಒಂದು ಬೇರೆ ಕೃತಿ, ಪ್ರೇಕ್ಷಕನ, ಸಹೃದಯನ 'ಪ್ರತಿ' ಅದು. ಅದು ವಿಸ್ತರಣ, ಅರ್ಥಾಂತರಗಳಿಂದ ಕೂಡಿರುತ್ತದೆ.

-4-

ಪ್ರಸಂಗವೆಂಬ ಹಂದರಕ್ಕೆ ರಕ್ತಮಾಂಸಗಳನ್ನು, ಆಕಾರವನ್ನು, ಜೀವವನ್ನು ನೀಡುವ ಅಂಗಗಳು - ಸಂಗೀತ (ಹಾಡು, ಹಿಮ್ಮೇಳ), ನೃತ್ಯ, ಚಲನೆ, ಅಭಿನಯ, ರಂಗತಂತ್ರ, ಅರ್ಥಗಾರಿಕೆಗಳು. ಇವು ಪ್ರಸಂಗದ ಅನುವಾದಗಳೆ ಎಂದರೆ, ಹೌದು, ಆದರೆ ಅಲ್ಲ. ಎರಡೂ ನಿಜವೆ. ಪ್ರಸಂಗವೇ ಪ್ರದರ್ಶನದ ಆಧಾರ, ಪ್ರಸಂಗವಿಲ್ಲದೆ ಪ್ರದರ್ಶನವಿಲ್ಲ. ಆದರೆ, ಅದು ಕೇವಲ ಪ್ರಸಂಗಾನುಸರಣೆ ಅಲ್ಲ. ಅದು ಪ್ರಸಂಗಾಧಾರಿತ ಸೃಷ್ಟಿ, ಪುನಃಸೃಷ್ಟಿ, ಪ್ರತಿಸೃಷ್ಟಿಯೂ ಹೌದು.
ಪ್ರಸಂಗವನ್ನು ಪ್ರದರ್ಶನಕ್ಕೆ ತರುವ ಅಂಶಗಳಾದ ಹಾಡು, ವಾದ್ಯ, ಕುಣಿತ, ಮಾತು, ರಂಗಪದ್ಧತಿಗಳಿಗೆ ಒಂದು ಮಾರ್ಗ ಅರ್ಥಾತ್ ನಡೆದು ಬಂದ 'ಕ್ರಮ' ಇದೆ. 'ನಡೆ' ಇದೆ.

° ಡಾ. ಎಂ. ಪ್ರಭಾಕರ ಜೋಶಿ