ಈ ಪುಟವನ್ನು ಪ್ರಕಟಿಸಲಾಗಿದೆ
58
ಮುಡಿ


ಆದರೆ ಅದೇ ಅಂತಿಮವಲ್ಲ. ಹಾಗೆಂದು ಅದು ಬೇಕೆಂಬಂತೆ ಬದಲಾಯಿಸುವಂತಹದೂ ಅಲ್ಲ. ವೇಷಗಳಿಗೆ ನಿಶ್ಚಿತ ವಿಧಾನವಿದೆ, ಶೈಲಿ ಇದೆ, ವಿಭಾಗಗಳಿವೆ, ಸ್ಥಾನ ನಿರ್ದೇಶಗಳಿವೆ. ಈ ಎಲ್ಲಾ ಸೇರಿ ಪರಂಪರೆ, ಸಂಪ್ರದಾಯವೆಂಬುದಿದೆ. ಅದೇ ಕಲೆಯ ಚೌಕಟ್ಟು, "ಯಕ್ಷಗಾನ ಇದು, ಇದು ಯಕ್ಷಗಾನ'ವೆಂಬ ಗುರುತನ್ನು ನೀಡುವ ಅಂಶಗಳಿವು. ಆದರೆ ಅದು ತೀರ ಹೀಗೆಯೆ ಎಂಬಂತಿರುವ ಅತ್ಯಂತಿಕ ಶಾಸ್ತ್ರ ಅಲ್ಲ. ಅದರೊಳಗೆ ವೈವಿಧ್ಯಕ್ಕೆ ಎಡೆಯಿದೆ, ದಾರಿಗಳಿವೆ. ಕಲೆಯೆಂಬುದ ಹಾಗೆ - ಸ್ಥಿರ, ಚರ, ಅಂಶಗಳ ನಾಜೂಕಾದ ಮಿಶ್ರಣ ಅದು 'ಹೀಗೆಯೆ' ಎಂದರೆ 'ಹೌದು'; 'ಹೀಗೂ ಆಗಬಹುದು' ಎಂದರೆ ಅದೂ ಹೌದು. ಕೆಲವೊಮ್ಮೆ ಅದೂ ಸರಿ, ಇದೂ ಸರಿ ಎಂಬಂತಿರುತ್ತದೆ, ಕಲೆಯ ವ್ಯಾಕರಣ. ಹಾಗೆಂದು ಅದು ಸ್ವಚ್ಛಂದತೆ ಅಲ್ಲ. ಅದನ್ನು ಹೇಗೆ ಹೇಳಬಹುದು ಎಂಬುದು ಒಂದು ಸವಾಲೇ ಸರಿ. ಅದು ಭಾಷಿಕವಾದ ವಾದಕ್ಕಿಂತ, ಅನುಭವಕ್ಕೆ, ಸಮಗ್ರ ಕಲಾಪರಿಜ್ಞಾನಕ್ಕೆ, ಒಟ್ಟಂದದ ಸಮಗ್ರತೆಗೆ, ಕಲೆಯ ಸಮತೋಲಕ್ಕೆ ಸಂಬಂಧಿಸಿದ್ದು. ಶುಷ್ಕ ತರ್ಕದಲ್ಲಿ ನೋಡಿದರೆ ಅನಿವರ್ಚನೀಯವಾದುದು. ಕಲಾಸ್ವರೂಪ, ಕಲಾನುಭವ - ಎರಡೂ ಹಾಗೆಯೆ.
ವಸ್ತು, ಸಾಮಗ್ರಿ, ಕಲಾವಿದ - ಸೇರಿ ಕಲಾಪ್ರದರ್ಶನವಷ್ಟೆ? ದೇಶ, ಕಾಲ ಮತ್ತು ಆಯ್ದ ಕೃತಿಯ ಆಕೃತಿ (ಕಲಾ ಆಕೃತಿ - ಕಲಾಕೃತಿ)ಗಳು ಅದರ ಪರಿಕರ, ಪರಿಸರಗಳು, ಕಥೆ, ಪ್ರಸಂಗಗಳು, ವಸ್ತು, ಇವರು ಅದರ ಭೌತಿಕ ಪರಿಕರಗಳು - ವೇಷ, ವಾದ್ಯ, ಬಣ್ಣ, ರಂಗ-ಗಳು ಅದರ ಸಾಮಗ್ರಿ, ಕಲಾವಿದನೆಂದರೆ ವ್ಯಕ್ತಿ, ಅವನ ಅಧ್ಯಯನ, ಸಂಸ್ಕಾರ, ಅನುಭವ, ಕಲ್ಪನೆಗಳ ಮೊತ್ತ. ಪ್ರೇಕ್ಷಕರೂ ಅದೇ ರೀತಿ, ಯಕ್ಷಗಾನವೆಂಬುದು ಕಲೆ, ಅದರ ಶೈಲಿಯು ಆಕೃತಿ. ಅದಕ್ಕೆ ಆಶ್ರಯ ನೀಡುವ ಕಾಲದೇಶಗಳು ನಿರಂತರ, ಅವು ವಿಶಾಲ, ಸೀಮಿತ ಎರಡೂ ಹೌದು.

-5-

ಸಭಾಲಕ್ಷಣವೆಂಬ ಪೂರ್ವರಂಗವು ಯಕ್ಷಗಾನದ ಆರಾಧನಾ ವಿಧಿ, ಆಟವಿಡಿ ಆರಾಧನೆಯೆ ಹೌದಾದರೂ, ಪೂರ್ವರಂಗವು ನೇರವಾಗಿ ಆರಾಧನಾತ್ಮಕ, ritualistic. ಪ್ರಸಂಗವು ಪರೋಕ್ಷವಾಗಿ ಆರಾಧನೆ. ಪೂರ್ವರಂಗವು ಹೆಚ್ಚು ಕಡಮೆ ನಿಶ್ಚಿತ, ಕಟ್ಟುಕಟ್ಟಲೆ, ಅದು ಪರಿವರ್ತನಾತ್ಮಕವಲ್ಲ. ಅದರಲ್ಲಿ ಹೊಸತನಕ್ಕೆ ಪ್ರಾಶಸ್ತ್ರವಿಲ್ಲ.
ಪ್ರಸಂಗದ ಪ್ರಯೋಗವು ಕಲಾವಿದನ ಅರ್ಥೈಸುವಿಕೆ, ಮನನದ ಫಲ. ಅದನ್ನವನು ಅರ್ಥ ಮಾಡಿಕೊಂಡ ಹಾಗೆ, ಅವನ ಪ್ರದರ್ಶನವಿರುತ್ತದೆ. ಹಲವು ಬಾರಿ ಕೇಳಿದ, ಕಂಡ, ಆಡಿ ತೋರಿಸಿದ ಪ್ರಸಂಗವಾದರೂ ಹೊಸ ಸ್ಪುರಣಗಳನ್ನು ನೀಡುವುದು ಅನುಭವಸಿದ್ದ.

• ಡಾ. ಎಂ. ಪ್ರಭಾಕರ ಜೋಶಿ