ಈ ಪುಟವನ್ನು ಪ್ರಕಟಿಸಲಾಗಿದೆ

ಮುಡಿ

63

ಪ್ರದರ್ಶನಗಳ ಸಂಖ್ಯಾವೃದ್ಧಿ, ಗಮನಿಸಿದರೆ 30 ಮೇಳಗಳು, ಸುಮಾರು 200 ಹವ್ಯಾಸಿ ತಂಡಗಳು, ನಾಲ್ಕಾರು ಅರೆ ವ್ಯವಸಾಯಿ ಮೇಳಗಳು, ನೂರಾರು ತೀರ ಹವ್ಯಾಸಿ, ಶಾಲಾ ಕಾಲೇಜು ತಂಡಗಳು, ವರ್ಷಕ್ಕೊಮ್ಮೆ ಪ್ರದರ್ಶಿಸುವ ತಂಡ ಇತ್ಯಾದಿಗಳೆಲ್ಲ ಸೇರಿ ಸುಮಾರು ಹತ್ತು ಹನ್ನೆರಡು ಸಾವಿರ ಪ್ರದರ್ಶನಗಳು ಜರಗುತ್ತಿವೆ. ನಾಲ್ಕೈದು ಜಿಲ್ಲೆಗಳ ಚಿಕ್ಕ ಪ್ರದೇಶದಲ್ಲಿ ಸುಮಾರು ಇನ್ನೂರು ಕಿಲೋಮೀಟರ್ ಉದ್ದ, ನೂರು ಕಿಲೋಮೀಟರ್ ಅಗಲದ ಕರಾವಳಿ - ಮಲೆನಾಡುಗಳ ಪ್ರದೇಶದಲ್ಲಿ, ಈ ಯಕ್ಷಗಾನ ಮಾರುಕಟ್ಟೆ, ಒಂದು ಆರ್ಶ್ಚಯಕರ ವಿದ್ಯಮಾನ. ಇಷ್ಟು ಕಾಲ ಇದು ಬಾಳಿದುದೇ ವಿಚಿತ್ರ.
ಒಂದು ಕಡೆ ಸಂಖ್ಯಾವೃದ್ಧಿಯ ಸಮೃದ್ಧಿಯಿಂದ, ಆಟಗಳು ವಿರಳವಾದ, ಅಪರೂಪದ ಪ್ರಾಪ್ತಿಗಳಲ್ಲ. ಇನ್ನೊಂದೆಡೆ ಸಂಖ್ಯೆ ಏರಿಕೆಯಿಂದ, ಗುಣಮಟ್ಟ ಕುಸಿತದ ಸಮಸ್ಯೆ ಬೇರೆ ಇದೆ. ಈ ಮಧ್ಯೆ ನಗರೀಕರಣ, ಅವಸರದ ಬದುಕು, ಚಿಕ್ಕ ಸ್ವತಂತ್ರ ಕುಟುಂಬಗಳು, ಎಲ್ಲರಿಗೂ ಇರುವ ವ್ಯವಹಾರದ ಬಿಸಿ ಇವೆಲ್ಲ ಸ್ಥಿತಿಗಳು ಇರುವುದರಿಂದ ಆಟ ನೋಡುವ ವಿರಾಮ ಕಡಿಮೆ ಆಗಿದೆ. ಸೌಕರ್ಯ ಸೌಲಭ್ಯಗಳ ಜೀವನದಿಂದಾಗಿ, ಸ್ವಂತ ವಾಹನ ಸೌಕರ್ಯಗಳಿಂದಾಗಿ ಮಧ್ಯಮವರ್ಗದ ಒಂದು ಭಾಗ ರಾತ್ರಿಯಿಡೀ ನಿದ್ರೆಗೆಡುವುದಿಲ್ಲ. ಇದೆಲ್ಲ ಕಾಲದ ಪ್ರಭಾವ, ಕಾಲದ ಕರೆ. ಈ ಮಧ್ಯೆ ಎಲೆಕ್ಟ್ರಾನಿಕ್ ಮನರಂಜನೆಯೂ, ಸ್ವಲ್ಪಮಟ್ಟಿಗೆ ಆಟಗಳ ಪ್ರೇಕ್ಷಕ ಜನರನ್ನೂ ತಲಪಿದೆ.
ಏತನ್ಮಧ್ಯೆ ವಿಶ್ವಮಾರುಕಟ್ಟೆಯ ಒತ್ತಡಗಳಿಂದಾಗಿ ಕೃಷಿ ಉತ್ಪನ್ನಗಳ ಬೆಲೆಗಳು ಇಳಿದುದು ಯಕ್ಷಗಾನಕ್ಕೆ ದೊಡ್ಡ ಪೆಟ್ಟಾಗಲಿದೆ. ಯಕ್ಷಗಾನದ ದೊಡ್ಡ ಬೆಂಬಲವಾಗಿರುವ ಅಡಿಕೆ, ತೆಂಗು ಬೆಳೆಗಳ ಬೆಲೆ ಕುಸಿದದ್ದು ವ್ಯವಸಾಯಿ ಮೇಳಗಳಿಗೆ ನೇರ ಹೊಡೆತವಾಗಲಿದೆ.
ಈಯೆಲ್ಲ ಎಚ್ಚರಿಕೆಗಳನ್ನು ಗಮನಿಸಿ, ಯಕ್ಷಗಾನವು ಹೊಣೆ, ಹೊಂದಾಣಿಕೆಗಳನ್ನು, ಎಜಸ್ಟಮೆಂಟುಗಳನ್ನು ಅಂಗೀಕರಿಸಬೇಕು. ಕಾಲದ ಒತ್ತಡದ ಮುಂದೆ, ಹಠ ನಿಲ್ಲುವುದಿಲ್ಲ. ಮಿತ ಅವಧಿಯ ಯಕ್ಷಗಾನಕ್ಕೀಗ, ಜನರ ಒಂದು ವಿಭಾಗದ ಒಲವು ಹೆಚ್ಚಿದೆ. 1985ರಲ್ಲಿ ಇಡಗುಂಜಿ ವೇಳವು ಸ್ವೀಕರಿಸಿದ ಈ ನೀತಿಯನ್ನು ಈಗ ಬೇರೆ ಸಂಘಟನೆಗಳೂ ಒಪ್ಪುತ್ತಿವೆ. ಇಡಿ ರಾತ್ರಿಯ ಮೇಳಗಳೂ ಮಿತಸಂಖ್ಯೆಯಲ್ಲಿ ಉಳಿದು ಬರಲಿವೆ, ಎಂಬುದೂ ಸತ್ಯ. ಆದರೆ, ಈಗ ಇರುವಷ್ಟು ಅಲ್ಲ. ಹರಕೆ ಆಟಗಳ ಮೇಳಗಳು ಸುಮಾರು 2010ನೆಯ ಇಸವಿಗೆ, ಮೂರುನಾಲ್ಕು ಗಂಟೆಗಳ ಆಟಗಳನ್ನಾಡುವ ಸಂಭವವಿದೆ.

ಡಾ. ಎಂ. ಪ್ರಭಾಕರ ಜೋಶಿ