86
ಮುಡಿ
-4-
ಹಿಮ್ಮೇಳದಲ್ಲಿ (ಪಿನ್‌ಪಾಟ್ಟು, ಪಿನ್= ಹಿಂದೆ, ಪಾಟ್ಟು = ಹಾಡು) ಓರ್ವ ಗಾಯಕ,
ಒಂದು ಕುರುಕ್ಕುಳಲ್ (ಚಿಕ್ಕ ಮೌರಿ, ಶಹನಾಯಿಯ ಹಾಗೆ), ಮದ್ದಲೆ ಮತ್ತು ತಾಳ, ಮತ್ತು
ಶ್ರುತಿಗಳಿರುತ್ತವೆ. ಪದ್ಯ - ಹಿಮ್ಮೇಳದೊಂದಿಗೆ, ಪಾತ್ರಗಳ ಪ್ರವೇಶ, ಕುಣಿತ, ಚಲನೆ,
ನಿರ್ಗಮನಗಳಿರುತ್ತವೆ. ಎಡೆಯಲ್ಲಿ ಮಾತು (ಅರ್ಥಗಾರಿಕೆ ಇದ್ದ ಹಾಗೆ) ಇದೆ. ಆದರೆ ಮಾತಿನ
ಅಂಶ ಸಣ್ಣದು. ಸುಮಾರು ಶೇಕಡಾ ಇಪ್ಪತ್ತು ಮಾತ್ರ. ಹಿಮ್ಮೇಳ ನೆಲದಿಂದ ತುಸು ಎತ್ತರದ
ದಿವಾನ್‌ನಂತಹ ತಗ್ಗು ಮಂಚದ ಮೇಲೆ ಕುಳಿತಿರುತ್ತದೆ. ಹಿಂದೆ ಹಿಮ್ಮೇಳವು ನಿಂತು ಕೊಂಡೇ
ಸಂಗೀತವನ್ನು ನಿರ್ವಹಿಸುತ್ತಿತ್ತು. ಈಗಲೂ ಕೆಲವೆಡೆ ಈ ಕ್ರಮ ಉಂಟು. ಹೆಚ್ಚಿನ ಪಾತ್ರಗಳು
ತೆರೆಯಲ್ಲಿ ಪ್ರವೇಶಿಸಿ, ಆ ಬಳಿಕ ರಂಗಕ್ಕೆ ಬರುತ್ತವೆ. ಪಾತ್ರಾನುಗುಣವಾಗಿ, ಪ್ರವೇಶದ ಕುಣಿತ,
ಅಭಿನಯಗಳಲ್ಲಿ ವ್ಯತ್ಯಾಸಗಳಿವೆ. ಪ್ರತಿಯೊಂದು ಪಾತ್ರವು ವೃತ್ತವೊಂದನ್ನು ಹಾಡಿ ಅಥವಾ
ಅದರ ಆರಂಭವನ್ನು ಎತ್ತಂಗಡಿ ಮಾಡಿ ಪ್ರವೇಶಿಸುತ್ತದೆ. ತೆರುಕೂತ್ತಿನ ಸಂಗೀತವು ಪ್ರಾಚೀನ
ದಕ್ಷಿಣಾದಿ ಸಂಗೀತದ ಒಂದು ಕವಲು. ಅದಕ್ಕೆ ತನ್ನದಾದ ಶೈಲಿಯ ಸ್ವಂತಿಕೆ ಇದೆ.
ಪಾತ್ರಗಳು ರಂಗದಲ್ಲಿ ಹಾಡುತ್ತವೆ ಮತ್ತು ಸ್ವಲ್ಪ ಮಾತಾಡುತ್ತವೆ. ಹಿಂದಿನ
ಕಾಲದಲ್ಲಿ, ಪಾತ್ರಗಳು ಹಾಡಿ, ಕುಣಿದು ಮಾತ್ರ ಪಾತ್ರಾಭಿವ್ಯಕ್ತಿ ಮಾಡುತ್ತಿದ್ದವೆಂದೂ,
ತೆರುಕೂತ್ತಿನಲ್ಲಿ ಮಾತುಗಾರಿಕೆ, ಆ ಬಳಿಕದ ಕಾಲದಲ್ಲಿ ಸೇರಿಕೊಂಡದ್ದೆಂದೂ ಊಹೆಯಿದೆ.
ತೆರುಕೂತ್ತಿನ ರೂಪವು ಇಂದಿಗೂ ಈ ಊಹೆಯನ್ನು ಸಮರ್ಥಿಸುತ್ತದೆ. ಮಾತು ಇರುವ,
ಇಲ್ಲದಿರುವ ಎರಡೂ ರೂಪಗಳೂ ಆ ಕಲೆಯಲ್ಲಿ ಇದ್ದಿರಬಹುದು. ಹಾಡು-ಹಿಮ್ಮೇಳ-
ಕುಣಿತ ಮಾತುಗಳ ಹೊಂದಾಣಿಕೆ ಯಕ್ಷಗಾನದಂತೆಯೆ ಇದೆ.
ತೆರುಕೂತ್ತಿನ ಒಂದು ವಿಶೇಷವೆಂದರೆ ರಂಗದಲ್ಲಿ ಇಬ್ಬರು ಸ್ವತಂತ್ರ ಸಹಾಯಕ
ಪಾತ್ರಗಳಿರುವುದು. ಕಟ್ಟಿಯಂಕ್ಕಾರನ್ ಮತ್ತು ಕೋಮಾಳಿ, ಕಟ್ಟಿಯಂಕಾರನು ಒಂದು
ಬಗೆಯಲ್ಲಿ ನಿರ್ದೇಶಕ ಮತ್ತು ರಂಗ ಸಹಾಯಕನಿದ್ದಂತೆ. ಪಾತ್ರಗಳು ಅವನೊಂದಿಗೆ
ಸಂಭಾಷಿಸಿ ಪರಿಚಯ ಹೇಳುವುದು ಮೊದಲಾದ ಕೆಲಸಗಳನ್ನು ಅವನು ಮಾಡುತ್ತಾನೆ. ಅಲ್ಲದೆ
ರಂಗ ಪರಿಕರ, ನಿರ್ವಹಣೆ ಕೂಡ ಅವನದೆ. (Stage Management) ಕೋಮಾಳಿ
ಎಂಬವನು ನಮ್ಮ ಹನುಮ ನಾಯಕ ಅಥವಾ ಹಾಸ್ಯಗಾರ. ಅವನು ವಿದೂಷಕ, ದೂತ
ಎಲ್ಲವೂ ಆಗಿರುತ್ತಾನೆ.