ಈ ಪುಟವನ್ನು ಪ್ರಕಟಿಸಲಾಗಿದೆ

88

ಮುಡಿ

ಬೆಂಬಲಿಸಿಲ್ಲ. ಇದರಿಂದ ಈ ಕಲೆಯು ಆರ್ಥಿಕವಾಗಿ ಸಶಕ್ತವಾಗಿಲ್ಲ. ಅದಕ್ಕೆ ಉತ್ತಮ ಪ್ರೇಕ್ಷವರ್ಗವೂ ಬೆಳೆದಿಲ್ಲ.
ತೆರುಕೂತ್ತು ಹೆಚ್ಚಾಗಿ, ಹವ್ಯಾಸಿ ಕಲೆ. ಅದನ್ನು ವೃತ್ತಿಯಾಗಿ ಪ್ರದರ್ಶಿಸುವ ತಂಡಗಳೂ ಕೆಲವಿವೆ. ಒಂದೆ ಜನವರ್ಗದವರ ತಂಡಗಳೂ ಇವೆ. ಮಧುರೆ ಈ ಆಟಗಳ ಕೇಂದ್ರ. ತಂಜಾವೂರು, ಮಧುರೈ, ತಿರುಚಿನಾಪಳ್ಳಿ, ತಿರುನೆಲ್ವೇಲಿ, ರಾಮನಾಥಪುರ, ಸೇಲಂಗಳಲ್ಲಿ ಹೆಚ್ಚು ಪ್ರಚಾರದಲ್ಲಿವೆ. ಆಧುನಿಕ ನಗರಗಳ, ಬಡಜನರ ಮಧ್ಯೆ, ಹಲವು ತೆರುಕೂತ್ತು ತಂಡಗಳು ಉದಿಸಿವೆ. ಉತ್ತರ ಆರ್ಕಾಡು (ಬಹುಶಃ ತೆರುಕೂತ್ತಿನ ಮೂಲಸ್ಥಾನ) ಜಿಲ್ಲೆಯಲ್ಲಿ ಒಂದೆರಡು ತಂಡಗಳು, ಇದರ ಸಾಂಪ್ರದಾಯಿಕ ರೂಪವನ್ನು ಕಾಪಾಡಿಕೊಂಡು ಬಂದಿವೆ. 1850ರ ಬಳಿಕ ತೆರುಕೂತ್ತು ಕಾಯಕಲ್ಪ ಹೊಂದಿ, ಈಗಿನ ರೂಪಕ್ಕೆ ಬಂದಿತೆನ್ನುವರು. ತೆರುಕೂತ್ತಿನ ಉಗಮ, ವಿಕಾಸ, ತಿರುವುಗಳು ಮೊದಲಾದವುಗಳಿಗೂ ಯಕ್ಷಗಾನದ ಇತಿಹಾಸಕ್ಕೂ ನಿಕಟ ಸಮಾನತೆಗಳಿವೆ.
ಉತ್ಸವಗಳಲ್ಲಿ, ಗ್ರಾಮೀಣವಾದ ವಿಶೇಷ ಸಂದರ್ಭಗಳಲ್ಲಿ ತೆರುಕೂತ್ತಿನ ಪ್ರದರ್ಶನಗಳು ಜರಗುತ್ತವೆ. ಬಯಲಿನಲ್ಲಿ ರಂಗಮಂಟಪವನ್ನು ಹಾಕಿ ಪ್ರದರ್ಶಿಸುತ್ತಾರೆ. ಹರಕೆ ಪ್ರದರ್ಶನಗಳನ್ನಾಗಿ ಅಥವಾ ವಿನೋದಕ್ಕಾಗಿಯೂ ಏರ್ಪಡಿಸುತ್ತಾರೆ. ಮಳೆ ಮೊದಲಾದವುಗಳಿಗಾಗಿ ಆಟ ಆಡಿಸಿದರೆ ಅದು 'ಶಾಂತಿ ಕೂತ್ತು' ಎನಿಸುತ್ತದೆ.

-೬-

ತೆರುಕೂತ್ತಿನ ಮುಖವರ್ಣಿಕೆ, ವೇಷ ಭೂಷಣಗಳು ಶೈಲೀಕೃತ ರಮ್ಯಾದ್ಭುತ, ಅವು ವಾಸ್ತವಿಕ ಅಥವಾ ಜನಪ್ರಿಯ 'ನಾಟಕ' ಜಾತಿಯವುಗಳಲ್ಲ. ಆದರೆ, ಯಕ್ಷಗಾನ. ಕಥಕ್ಕಳಿಗಳಷ್ಟು ನಿಖರ ವಿಭಾಗ, ವಿಸ್ತಾರ ವೈಭವಗಳು ಅದಕ್ಕಿಲ್ಲ. ಕಚ್ಚೆ, ದಗಲೆ, ಚಲ್ಲಣ, ನಿಲುವಂಗಿ, ಗೋಪುರ ಪ್ರಭಾವಳಿಯ ಕಿರೀಟ, ಎದೆಪದಕ, ಡಾಬು, ದೊಡ್ಡ ಭುಜ ಕೀರ್ತಿಗಳು ಹೆಚ್ಚಿನ ವೇಷಗಳಿಗಿವೆ. ಸ್ತ್ರೀ ವೇಷಗಳು ಸಾಮಾನ್ಯ ಸಾಮಾಜಿಕಕ್ಕೆ ಹತ್ತಿರ. ರಾಜ - ರಾಕ್ಷಸ ವೇಷಗಳಿಗೆ ವ್ಯತ್ಯಾಸವಿದೆ. ಬಣ್ಣಗಾರಿಕೆ ವಿಶಿಷ್ಟವಾಗಿದ್ದು, ಕೆಲವಂಶಗಳಲ್ಲಿ ತೆಂಕುತಿಟ್ಟನ್ನು ಹೋಲುತ್ತದೆ. ಒಟ್ಟು ವೇಷದ ರೂಪ, ಭೂಷಣ ಆಭರಣಗಳು, ಆಂಧ್ರದ ವೀಧಿನಾಟಕ, ಕರ್ನಾಟಕದ ಮೂಡಲಪಾಯಗಳನ್ನು ಬಹುವಾಗಿ ಹೋಲುತ್ತವೆ. ಹೆಚ್ಚು ಕಡಿಮೆ ಒಂದೇ ಎಂಬಷ್ಟು ನಿಕಟವಾಗಿವೆ. ಇದು ಬಯಲಾಟ ಕಲೆಯ ಈ ಶೈಲಿಯು ಈ ಮೂರು ಪ್ರದೇಶಗಳಲ್ಲಿ ಒಂದೆಡೆಯಿಂದ ಪ್ರಸರಣ ಹೊಂದಿದುದನ್ನು ಸೂಚಿಸುತ್ತಿರಬಹುದು. ತೆರುಕೂತ್ತಿನಲ್ಲಿ, ಈಗ ಸಿನಿಮೀಯ, ನಾಟಕೀಯ ವೇಷವಿಧಾನ ಮಿಶ್ರವಾಗಿದೆ.

0 ಡಾ. ಎಂ. ಪ್ರಭಾಕರ ಜೋಶಿ