ಈ ಪುಟವನ್ನು ಪ್ರಕಟಿಸಲಾಗಿದೆ

ಉಪೋದ್ಘಾತ.






॥ಶ್ರೀರಾಮ ಪ್ರಸನ್ನ॥

ಮಹನೀಯರಾದ ದೇಶಬಾಂಧವರೇ!

ಹಲವು ಮಹಾಕಾವ್ಯ, ನಾಟಕ, ಚಂಪೂಗ್ರಂಥಗಳನ್ನು ಅವಲೋಕಿಸಿ, ನಲಿನಲಿದಾಡುತ್ತಿರುವ ರಸಿಕ ಸಮಾಜದಲ್ಲಿ, ಅಲ್ಪ ಮತಿಯ ಆತ್ಮಕೃತಿಬದ್ಧವಾದ ಈ ರಮಾನಂದಾಭಿಧಾನದ ನೀರಸಪ್ರಬಂಧರಚನೆಯು ಹಾಸ್ಯಾಸ್ಪದವಾಗಿಯೇ ಪರಿಣಮಿಸ ಬಹುದಲ್ಲವೆ? ಸಹಜ! ಏಕೆಂದರೆ,-,

ನಾಟಕಕ್ಕೆ ಮುಖ್ಯವಾಗಿ ಅಲಂಕಾರಪ್ರಾಯಗಳಾಗಿರುವ ಶೃಂಗಾರ, ವೀರ, ಅದ್ಭುತ, ಹಾಸ್ಯರಸಗಳೂ, ತಕ್ಕಂತೆ ಹಾವ ಭಾವ, ವಿಲಾಸ ವಿಭ್ರಮಾದಿ ವರ್ಣನೆಗಳೂ, ವಿರಹ ಸಂತಾಪಾದಿ ವಿಷಯ ವಿಕಾರಗಳೂ ಇವಾವುದನ್ನೂ ತೋರದೆ, ಕೇವಲ ಶಾಂತಿರಸ ಪ್ರಧಾನವಾದ ರಮಾನಂದವನ್ನು ನೋಡಿ ರಸಿಕರ ಚಿತ್ತವು ಆಕ್ಷೇಪಿಸದಿರು ವುದು ಹೇಗೆ? ಆದರೆ, ಆಕ್ಷೇಪವೆಂತಹದಾಗಿರಬೇಕು?

೧. ಶೃಂಗಾರಾದಿ ಪ್ರಧಾನ ರಸವನ್ನೇ ಬಿಟ್ಟಿರುವುದರಿಂದ ಅಷ್ಟಾಗಿ ಶೋಭಿಸಲಾರದು.

೨. ಕಥಾನಾಯಕನಾದ ರಮಾನಂದನಲ್ಲಿ ಆದರ್ಶಯೋಗ್ಯವಾದಷ್ಟು ವಿನಯಶೀಲತೆಯನ್ನುಂಟು ಮಾಡಿದ್ದರೆ ಚೆನ್ನಾಗಿ ಕಾಣುತ್ತಿದ್ದಿತು.

೩. ಕಥೆಗೆ ಉಪಯುಕ್ತಗಳಾದ ಹಾಡುಗಳನ್ನು ಕೊಡದೆ ಬಿಟ್ಟಿರುವುದೂ, ಉದ್ದುದ್ದದ ಭಾಷಣಗಳಿಂದಲೇ ತುಂಬಿಸಿರುವುದೂ ಅಷ್ಟಾಗಿ ತೃಪ್ತಿಕರವಾಗಿಲ್ಲ.

ಇವೇ ಆಕ್ಷೇಪಗಳಾಗಿರಬೇಕಲ್ಲವೆ? ಇರಲಿ, ತಕ್ಕಷ್ಟು ಸಮಾಧಾನವನ್ನು ಕೊಡಬೇಕಾದುದು ನಮ್ಮ ಕರ್ತವ್ಯವಾಗಿದೆ. ಹೇಗೆಂದರೆ:

೧. ರಮಾನಂದನಲ್ಲಿ ಶೃಂಗಾರ ರಸವಿಲ್ಲದಿರುವುದಕ್ಕೆ ಕಾರಣವೆಂದರೆ, ರಮಾನಂದನು ಪ್ರಾಥಮಿಕ ಶಿಕ್ಷಣದಲ್ಲಿ ಉತ್ತೀರ್ಣನಾಗಿ, ಪ್ರೌಢತರಗತಿಗೆ ಬರಲು ಅರ್ಹತೆಯನ್ನುಂಟುಮಾಡುವ ಗುರುಕುಲವಾಸದಲ್ಲಿರಬೇಕಾದ ವಿದ್ಯಾರ್ಥಿ, ವಿದ್ಯಾರ್ಥಿಗಳಿಗೆ ವಿಲಾಸ ವಿಭ್ರವಾದಿ ಶೃಂಗಾರ ರಸಗಳು ಸರ್ವಥಾ ಪರಿತ್ಯಾಜ್ಯವೆಂದು ಬಲ್ಲವರು ಹೇಳುವದಲ್ಲವೆ?