ಈ ಪುಟವನ್ನು ಪ್ರಕಟಿಸಲಾಗಿದೆ
viii

ಶಾಸನವು ಸುಮಾರು ೧೧೧೫ರಲ್ಲಿ ಬರೆದುದು. ಇದರಲ್ಲಿ ಮೇಲಣ ಪದ್ಯದಲ್ಲಿ ಹೇಳಿರುವ ಮೇಘಚ೦ದ್ರನು ೧೧೫ರಲ್ಲಿ ಗತಿಸಿದಂತೆ ತಿಳಿಸಿದೆ. ಆದುದರಿಂದ ಈ ಗ್ರಂಥವು ೧೧೧೫ ಕ್ಕೆ ಮೊದಲೇ ಹುಟ್ಟಿರಬೇಕು.
(೪) ಮದರಾಸಿನ ಪ್ರಾಚ್ಯ ಕೋಶಾಲಯದಲ್ಲಿ ದೊರೆತ, ೧೧೦೫ ರಲ್ಲಿ ತ್ರಿಭುವನಮಲ್ಲನ ಆಳಿಕೆಯಲ್ಲಿ ಬರೆದ, ಒಂದು ಶಾಸನದಲ್ಲಿ ಒಬ್ಬ ಹಂಪಕವಿಯ ಹೆಸರು ದೊರೆಯುತ್ತದೆ. ಈ ಕವಿಯು ನಾಗಚಂದ್ರನೇ ಇರಬಹುದು.
(೫) ಕಂತೀ ಹಂಪನ ಸಮಸ್ಯೆಗಳನ್ನು ಅನೇಕರು ಕೇಳಿರಬಹುದು. ಈ ಕಂತಿಯು ದ್ವಾರಸಮುದ್ರದ ಬಳ್ಳಾಳ ವಿಷ್ಣುವರ್ಧನರಾಯನ (೧೧೦೪-೧೧೪೧) ಆಸ್ಥಾನ ಪಂಡಿತೆಯಾಗಿದ್ದ ಪ್ರಸಿದ್ಧಳಾದ ಒಬ್ಬ ಕಬ್ಬಿಗಿತಿ. ಅಭಿನವ ಪಂಪನೂ ಅದೇ ಆಸ್ಥಾನದಲ್ಲಿ ಪಂಡಿತನಾಗಿದ್ದಿರಬೇಕು.
ಮೇಲೆ ಹೇಳಿರುವ ಕಾರಣಗಳಿಂದ ಅಭಿನವಪಂಪನು ಸುಮಾರು ೧೦೫ ರಲ್ಲಿ ಇದ್ದಿರಬೇಕೆಂದು ತೋರುತ್ತದೆ.
ಕಥಾವಿಷಯ - ವಿಪುಲಾಚಲದಲ್ಲಿ ವೀರಜಿನ ಪಾರ್ಶ್ವದಲ್ಲಿ ಗಣಾಗ್ರಣಿಯಾದ ಗೌತಮನು ಮಗಧಾಧಿಪನಿಗೆ ಹೇಳಿದ ರಾಮಕಥೆಯನ್ನು ತಾನು ವರ್ಣಿಸುವೆನೆಂದು ಕವಿಯು ಹೇಳುತ್ತಾನೆ (೧-೪೦). ಈ ಕಥೆಯು ಗುರುಪರಂಪರಾಗತ ವಾಗಿ ಬಂದಂತೆ ತಿಳಿಯಬರುತ್ತದೆ. ಮೇಲೆ ಹೇಳಿದಂತೆ ಕಥೆಯು ಸಾಮಾನ್ಯ ವಾಗಿ ವಾಲ್ಮೀಕಿ ರಾಮಾಯಣವನ್ನು ಹೋಲುವುದಾದರೂ ಇವೆರಡಕ್ಕೂ ಅನೇಕ ವ್ಯತ್ಯಾಸಗಳಿರುವುವು. ಅಭಿನವಪಂಪನ ಕಥೆಯಲ್ಲಿ ಅನೇಕ ಮಂದಿಗೆ ಜಿನಮುನಿಗಳು ಜನ್ಮಾಂತರ ನಿರೂಪಣವನ್ನು ಮಾಡಿ ಇಹಲೋಕದಲ್ಲಿಯ ಆಶೆಗಳನ್ನು ತಪ್ಪಿಸಿ ದೀಕ್ಷೆಗೊಳ್ಳುವಂತೆ ಮಾಡುವರು. ಆದರೆ ವಾಲ್ಮೀಕಿಯು ರಾಮನನ್ನು ಯಾವಕುಂದೂ ಇಲ್ಲದವನನ್ನಾಗಿಯೂ ಕಥೆಗೆ ಮುಖ್ಯ ನಾಯಕನನ್ನಾಗಿ ವರ್ಣಿಸಿರುವಂತೆ ಅಭಿನವಪಂಪನು ವರ್ಣಿಸದೆ ಲಕ್ಷ್ಮಣನನ್ನೇ ಮುಖ್ಯನನ್ನಾಗಿ ವರ್ಣಿಸಿ, ಇತರ ರಾಜರು ಉಲ್ಕಾಪಾತವನ್ನೋ ತಮ್ಮ ನರೆತ ಕೂದಲನ್ನೋ ನೋಡಿದ ಮಾತ್ರದಿಂದಲೇ ಪ್ರಪಂಚದ ಸುಖಗಳು ನಶ್ವರವೆಂದು ತಿಳಿದು ತಪಕ್ಕೆ ನಿಲ್ಲುವಂತೆ ವರ್ಣಿಸಿರುವಾಗ ರಾಮನಿಗೆ ಮಾತ್ರ ಕಡೆಯವರೆಗೂ ಈ ನೆನಪೇ ಇಲ್ಲದೆ ಲಕ್ಷ್ಮಣನು ಸತ್ತಾಗ ಅವನ ದೇಹವನ್ನು ಬಹುಕಾಲ ಬಿಡಲಾರದೆ ಅಪ್ಪಿಕೊಂಡಿದ್ದಂತೆ ವರ್ಣಿಸಿರುವುದು ಅಷ್ಟು ಸಮಂಜಸವಾಗಿ ತೋರುವುದಿಲ್ಲ. ಇಷ್ಟೇ ಅಲ್ಲದೆ, ಅಭಿನವಪಂಪನು ಲಕ್ಷ್ಮಣನಿಗೆ ಅನೇಕ ಸ್ಥಳಗಳಲ್ಲಿ ಮದುವೆಮಾಡಿಸಿ ರಾಮನಿಗೆ ಮೂರು ಕಡೆ ಮಾತ್ರ ಮದುವೆಮಾಡಿಸುವುದರಿಂದ ಕಥಾಸಂದರ್ಭಕ್ಕೆ ಹೇಗೆ ಹೆಚ್ಚು ಅನುಕೂಲ್ಯವು ದೊರೆತಿರುವುದೋ