ಈ ಪುಟವನ್ನು ಪ್ರಕಟಿಸಲಾಗಿದೆ

ನಿರ್ವಹಣೆಯಲ್ಲಿ 'ಅನುಶಾಸನ-ಸಂಘರ್ಷ-ಸಮನ್ವಯಗಳು ಹೇಗೆ ಸಮುಚಿತವಾಗಿ ಸಮ್ಮಿಶ್ರಿತವಾಗಿವೆ ಎಂಬುದನ್ನು ಲೇಖಕರು ಖಚಿತೋಚಿತವಾಗಿ ವಿವೇಚಿಸಿದ್ದಾರೆ.

"ಯಕ್ಷಗಾನ ಪಠ್ಯ: ವಿವಿಧ ಹಂತಗಳು' ಎಂಬ ಚಿಕ್ಕ ಲೇಖನ 'ರಂಗಪಠ್ಯ'ದ ಭಿನ್ನ ಭಿನ್ನ ಆಯಾಮಗಳನ್ನು ಪರಿಶೀಲಿಸಿ, ಸಂದರ್ಭೋಚಿತ ಪರಿವರ್ತನೆಯ ತತ್ತ್ವ ಮತ್ತು ಪಾಠಗಳ ಬಹುತ್ವವೇ ಕಲಾಕೃತಿಯ ಜೀವಾಳ ಎಂಬುದನ್ನು ಒತ್ತಿ ಹೇಳುತ್ತದೆ.

ಜೀವನದ ಪ್ರತಿಯೊಂದು ವಿಚಾರದಲ್ಲೂ ಭವಿಷ್ಯದ ಒಂದು ಕಲ್ಪನೆ, ಕನಸು, ನಿರೀಕ್ಷೆ ಇದ್ದೇ ಇರುತ್ತದೆ. ಯಕ್ಷಗಾನದಂಥ ಜನಪ್ರಿಯ ಕಲೆಯ ಬಗೆಗೂ ಭವಿಷ್ಯದ ಕಲ್ಪನೆ ಸಹಜವೇ. "ಇಪ್ಪತ್ತೊಂದನೆಯ ಶತಮಾನದಲ್ಲಿ ಯಕ್ಷಗಾನ ಪ್ರಸಂಗಗಳು' ಎಂಬ ಲೇಖನವು ಯಕ್ಷಗಾನ ಪ್ರಸಂಗ ಸಾಹಿತ್ಯದ ಚರಿತ್ರೆಯ ಸ್ಥೂಲ ನೋಟದೊಂದಿಗೆ ಪ್ರಸ್ತುತ ಕಾಲದ ಜೀವನದರ್ಶನ ಹಾಗೂ ಭವಿಷ್ಯದ ಪ್ರಸಂಗ ರಚನೆಯ ಮುನ್ನೋಟವನ್ನೂ ಒದಗಿಸುತ್ತದೆ.

ಒಟ್ಟಿನಲ್ಲಿ ಈ ಸಂಕಲನವು ಸಂವೇದನಾಶೀಲನೂ, ಬಹುಶ್ರುತನೂ, ಕಲೆಯ ಬಗೆಗೆ ಅತೀವ ಕಾಳಜಿ ಇದ್ದವನೂ ಆದೊಬ್ಬ ಜವಾಬ್ದಾರಿಯುತ ವಿಮರ್ಶಕನ 'ಪ್ರೌಢವಿಚಾರ. ಸಂಚಯವಾಗಿದೆ. ಉತ್ತಮ ಮೀಮಾಂಸಾ ಕೃತಿಯಾಗಿದೆ. ವಸ್ತುನಿಷ್ಠತೆಯ ಹೆಸರಲ್ಲಿ ಲೇಖಕರು ನೀರಸ ನಿರೂಪಕ ರಾಗುವುದಿಲ್ಲ. ಎಲ್ಲ ಲೇಖನಗಳಲ್ಲೂ ಲೇಖಕರ ಸಮತೋಲನ ದೃಷ್ಟಿ ಮತ್ತು ಪ್ರಬುದ್ಧತೆ ಗೋಚರಿಸುತ್ತದೆ. ಹಲವು ಆಧುನಿಕ ವಿಮರ್ಶಾ ಗ್ರಂಥಗಳಂತೆ ಇವರ ಶೈಲಿ ಅನವಶ್ಯಕವಾದ ಕ್ಲಿಷ್ಟತೆಯನ್ನೂ ಪಡಸುತನವನ್ನೂ ಹೊಂದಿರದೆ ಮಿತವಾದ ಪಾರಿಭಾಷಿಕ ಶಬ್ದಗಳಿಂದ ಕೂಡಿ ಆಪ್ಯಾಯಮಾನವಾಗಿದೆ. ಗೆಳೆಯ ಡಾ. ಜೋಶಿಯವರ ಈ ಇಷ್ಟವೃತ್ತಿ ಹೀಗೆಯೇ ಸಾಗಲೆಂದೂ, ಯಕ್ಷಗಾನ ವಿಮರ್ಶಾ ದಿಗಂತವನ್ನು ವಿಸ್ತರಿಸಿದ ಈ ಕೃತಿ ಯಕ್ಷಗಾನ ಅಧ್ಯಯನಶೀಲರಿಗೆ ಮೆಚ್ಚುಗೆಯಾಗಲೆಂದೂ ಹಾರೈಸುತ್ತೇನೆ:

ಒಲುಮೆ, ಅಡ್ಕ ಕೋಟೆಕಾರು
೧೪-೦೨-೧೯೯೮
ಅಮೃತ ಸೋಮೇಶ್ವರ