ಈ ಪುಟವನ್ನು ಪ್ರಕಟಿಸಲಾಗಿದೆ

ಲೇಖನವಾಗಿದೆ. ಇದರಲ್ಲಿ ಲೇಖಕರು ಆಧುನಿಕ ವಿಮರ್ಶಾ ಶಾಸ್ತ್ರದ ಸೂತ್ರಗಳೊಂದಿಗೆ ತಮ್ಮದೇ ಆದ ವಿಮರ್ಶೆಯ ನೆಲೆಗಳಿಂದಲೂ ವಿವೇಚನೆ ನಡೆಸುತ್ತಾರೆ. ಕಲೆಯ ಮೂಲಭೂತ ಅಂಶಗಳನ್ನು ಚರ್ಚಿಸಿ ವಿಮರ್ಶೆಗೆ ದೃಢವಾದ ತಳಗಟ್ಟನ್ನು ಬಲಿದು ವಿಷಯಗಳನ್ನು ವ್ಯವಸ್ಥಿತವಾಗಿ ಅಚ್ಚುಕಟ್ಟಾಗಿ ಮುಂದಿಡುತ್ತಾರೆ. ವಿಮರ್ಶೆಯ ಎಲ್ಲ ಆಯಾಮಗಳನ್ನು ಸೂಕ್ಷ್ಮವಾಗಿ ಚರ್ಚಿಸುತ್ತಾರೆ. ಯಕ್ಷಗಾನ ವಿಮರ್ಶಾ ಪರಂಪರೆಯನ್ನು ಪರಿಶೀಲಿಸುತ್ತಾರೆ. ವಿಮರ್ಶಕನಿಗಿರಬೇಕಾದ ನಿರ್ದಿಷ್ಟ ಗುಣಗಳನ್ನು ನಿರ್ದೇಶಿಸುತ್ತಾರೆ.

ಸಾರತಃ ಒಂದು ರಂಗಪ್ರಕಾರವಾದ ಯಕ್ಷಗಾನ ತಾಳಮದ್ದಳೆಯು ವಾಚಿಕಾಭಿನಯ ಪ್ರಧಾನವಾದ ಒಂದು ಸಂಕೀರ್ಣ ಆಶುನಾಟಕವಾಗಿ ರೂಪು ಗೊಳ್ಳುವ ಬಗೆಯನ್ನು, ತಾಳಮದ್ದಳೆಯ ಅರ್ಥದಾರಿಯ ವ್ಯಕ್ತಿತ್ವ, ಪಾತ್ರಗಳೊಳಗಿನ ಸಂಬಂಧ, ಪಾತ್ರಧಾರಿಗಳೊಳಗಿನ ವೈಯಕ್ತಿಕ ಸಂಬಂಧಗಳು ಈ ರಂಗವ್ಯಾಪಾರವನ್ನು ಹೇಗೆ ನಿರ್ವಹಿಸುತ್ತವೆಂಬುದನ್ನು ಅರ್ಥಗಾರಿಕೆ, ನಟ ವ್ಯಕ್ತಿ ಸಂಬಂಧ ಮತ್ತು ಪಾತ್ರಸೃಷ್ಟಿ- ಎಂಬ ಲೇಖನ ಸಮರ್ಥವಾಗಿ ಸಾದರಪಡಿಸುತ್ತದೆ. 'ಅಭಿನಯವೆಂದರೆ ವ್ಯಕ್ತಿತ್ವದ ಹೊರಚಾಚುವಿಕೆ' ಎಂಬುದನ್ನು ಪುಷ್ಟಿಕರಿಸುತ್ತ, ಪ್ರದರ್ಶನ ಹೇಗೆ ಪ್ರಸಂಗ ಮೀರಿ ಬೆಳೆಯುತ್ತದೆ, ಬೆಳೆಯ ಬೇಕು ಎಂಬುದನ್ನು ಲೇಖಕರು ವಿಶದೀಕರಿಸುತ್ತಾರೆ. ಈ ರಂಗದ ಎಲ್ಲಾ ಧನಾತ್ಮಕ ಅಂಶಗಳನ್ನು ಸರ್ವಂಕಷವಾಗಿ ಸಮೀಕ್ಷಿಸುತ್ತ ಇದರೊಂದಿಗೆ ಬೆಳೆದುಬಂದ ಕೆಲವು "ಪಿಡುಗುಗಳನ್ನು ಪ್ರಸ್ತಾವಿಸಲು ಇವರು ಮರೆಯುವು ದಿಲ್ಲ. "ಈ ರಂಗಕ್ಕೆ ದೊಡ್ಡ ಕೊಡುಗೆಗಳನ್ನಿತ್ತ ಕಲಾವಿದರೇ ಈ ಪ್ರವೃತ್ತಿಗಳಿಗೂ ಆಚಾರ್ಯಪುರುಷರಾಗಿರುವುದು ಖೇದಕರ' ಎಂಬ ನಿಷ್ಠುರ ಸತ್ಯವನ್ನು ಪ್ರಕಟಿಸಿದ್ದು ಶ್ಲಾಪ್ಯವೇ ಆಗಿದೆ.

ಯಕ್ಷಗಾನ ಕಲಾವಿದನ 'ಅರ್ಥಪ್ರಕ್ರಿಯೆ'ಯಲ್ಲಿ ಕ್ರಿಯಾಶೀಲವಾಗುವ ಅನೇಕ 'ಆಕರ ಅಂಶಗಳ ವಿಷಯವನ್ನು "ಅರ್ಥಗಾರಿಕೆ, ಆಕರ-ಪಠ್ಯನಿರ್ವಹಣೆ " ಎಂಬ ಲೇಖನ ಸೂಕ್ಷ್ಮವಾಗಿ ಚರ್ಚಿಸುತ್ತದೆ. ಇಲ್ಲಿ ಆಕರವೆಂಬುದನ್ನು ಕೇವಲ ಪ್ರಸಂಗ, ಪಠ್ಯ ಅಥವಾ ಕೆಲವು ಪುರಾಣ ಗ್ರಂಥಗಳಿಗಷ್ಟೇ .ಸೀಮಿತಗೊಳಿಸದೆ ಕಲಾವಿದನಿಗೆ ಮುಖಾಮುಖಿಯಾಗತಕ್ಕ ಹಲವಾರು ವಿಚಾರ, ಸನ್ನಿವೇಶಗಳನ್ನು ಗಣನೆಗೆ ತೆಗೆದುಕೊಳ್ಳುವ ಎಚ್ಚರ ಕಾಣಿಸುತ್ತದೆ. ಇಲ್ಲಿಯೂ ಸಾಕಷ್ಟು ಸಂದರ್ಭೋಚಿತ ದೃಷ್ಟಾಂತಗಳ ಪುಷ್ಟಿ ಇದೆ. ಔಚಿತ್ಯ ವಿಚಾರ ಉದ್ದಕ್ಕೂ ಪ್ರಸ್ತಾವಿತವಾಗಿದೆ. ಅರ್ಥಗಾರಿಕೆಯ ಆಕರ ಸಾಮಗ್ರಿಯ