ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ವಿಮರ್ಶೆಯ ನೆಲೆಗಳು / ೯೭

ಪರಂಪರೆಗೂ ಇರುವ ಸಂಬಂಧ ಸೀಮೆಗಳನ್ನು ನಿರ್ಧರಿಸುವಲ್ಲಿ ಇಂತಹ ವಿಮರ್ಶೆ ಒಂದಿಷ್ಟು ಗೊಂದಲಕ್ಕೆ ಬೀಳುವುದಿದೆ.

ಸಮಾಜನಿಷ್ಠ ಅಥವಾ ಆಧುನಿಕತಾ ಮೌಲ್ಯನಿಷ್ಠ ವಿಮರ್ಶೆಯು- ಮುಖ್ಯವಾಗಿ, ಯಕ್ಷಗಾನದಂತಹ ಕಲೆಗಳು ತಾವು ಒಳಗೊಳ್ಳುವ "ಪೌರಾಣಿಕ ಮೌಲ್ಯಾದರ್ಶಗಳನ್ನು ಪ್ರಸಾರಪಡಿಸುವುದರಿಂದ ಕಾಲ ಬಾಧಿತವೆಂದೂ, ಪ್ರಾಚೀನ ಕಾಲದ ವಿಚಾರಗಳ ಆರಾಧನೆಯನ್ನು ಪ್ರಚೋದಿಸಿ, ಬದಲಾವಣೆಯನ್ನು ವಿರೋಧಿಸುತ್ತದೆಂದೂ ಭಾವಿಸು ತ್ತವೆ. ಈ ನಿಲುವಿನ ಸತ್ಯಾಸತ್ಯತೆ ಏನೇ ಇದ್ದರೂ, ಇಲ್ಲೂ ಒಂದು ಮುಖ್ಯವಾದ ಚಿಂತನವಿದೆ. ಈ ವಿಮರ್ಶೆ ಕಲಾರೂಪಕ್ಕಿಂತ ಅದರ ಆಶಯಕ್ಕೆ ಪ್ರಾಮುಖ್ಯ ನೀಡುತ್ತದೆ.

ಈ ಮೂರೂ ದೃಷ್ಟಿಗಳನ್ನು ಒಳಗೊಂಡು, ಅದರಾಚೆಗೆ ಹೋಗಿ ನಾಲ್ಕನೆಯ ನೆಲೆಯನ್ನು ವಿಮರ್ಶೆ ಕಂಡುಕೊಳ್ಳಬೇಕಾಗಿದೆ. ಮೇಲೆ ಹೇಳಿದ "ಮೂರು ದೃಷ್ಟಿಗಳು ಆಳವಾದಾಗ, ಪರಸ್ಪರ ಸಹಕಾರಿಗಳಾಗ ಬಲ್ಲುವು. ಅಥವಾ, ಬೇರೊಂದು ನೆಲೆಗೆ ಬರಬಲ್ಲುವು” (ಲಕ್ಷ್ಮೀಶ ತೋಳ್ಳಾಡಿ). ಹೀಗೆ ಬರಬೇಕಾದರೆ; ವಿಮರ್ಶೆಯ ಪರಿಕಲ್ಪನೆಯಲ್ಲಿ ಹಲವು ವಿಚಾರಗಳನ್ನು ಯಕ್ಷಗಾನ ಸಂದರ್ಭದಲ್ಲಿ ಪರಿಶೀಲಿಸುವುದು ಅಗತ್ಯ.

ಪರಂಪರೆ - ಶೈಲಿ.

ಯಕ್ಷಗಾನ ವಲಯದಲ್ಲಿ ತುಂಬ ಮುಖ್ಯವಾಗಿ ಚರ್ಚಿತವಾಗುವ ವಿಚಾರ ಇದು. ಕೆಲವೊಮ್ಮೆ ಇದರ ಕುರಿತು ಬಾಲಿಶವಾದ ಸಮರ್ಥನೆ, ಬಾಲಿಶವಾದ ಆಕ್ಷೇಪ ಇವೆರಡೂ ಕಂಡುಬರುತ್ತವೆ. ಯಕ್ಷಗಾನವೆಂಬ ಸಮಗ್ರ ರಂಗಭೂಮಿಗೆ ಒಂದು ಪ್ರತ್ಯೇಕತೆ ಇರುವುದು ಅದರ ಶೈಲಿಯಿಂದ. ಈ ಶೈಲಿಯ ಅಡಿಪಾಯವನ್ನು ಒಪ್ಪಿಕೊಳ್ಳದಿದ್ದರೆ ನಮ್ಮ ವಿವೇಚನೆ, ಆಸಕ್ತಿಗಳಿಗೆ ಅರ್ಥವಿಲ್ಲ. ಶೈಲಿ ಎಂಬುದು, ಪರಂಪರೆ ಎಂಬುದು ಬಹುಕಾಲದಿಂದ ನಡೆದು ಬಂದು ಹಲವು ಬದಲಾವಣೆಗಳನ್ನು ಒಳಗೊಳ್ಳುತ್ತ ಸಾಗಿ ಬೆಳೆದಿರುವ ವಿಶಿಷ್ಟ, ಪ್ರತ್ಯೇಕ- ಎಂದು ಗುರುತಿಸ ಬಹುದಾದ ವಿಧಾನ. ಅದೊಂದು ಕಲಾಭಾಷೆ. ಯಕ್ಷಗಾನ ಒಂದು ಶೈಲಿಬದ್ಧ ಕಲೆ. ಯಕ್ಷಗಾನ ಶೈಲಿಗೆ ದೀರ್ಘ ಪರಂಪರೆ ಇದೆ, ಸತ್ವ ಇದೆ.