ಈ ಪುಟವನ್ನು ಪ್ರಕಟಿಸಲಾಗಿದೆ

೯೮ / ವಾಗರ್ಥ

ಅಸಾಧಾರಣ ಸೌಂದರ್ಯ ಇದೆ. ನಾವೀನ್ಯವನ್ನು, ಸೃಜನಶೀಲತೆಯನ್ನು ಒಳಗೊಳ್ಳಬಲ್ಲ ಸಾಮರ್ಥ್ಯವಿದೆ. ಸಾಮಾನ್ಯ ಮಟ್ಟದ ಕಲಾವಿದರ ಪ್ರದರ್ಶನ ಕೂಡ ನಮ್ಮನ್ನು ಒಂದು ಪ್ರಮಾಣದಲ್ಲಿ ರಂಜಿಸುವುದು, ಕಲೆಯು ಗಳಿಸಿಕೊಂಡಿರುವ ಸ್ವಸಾಮರ್ಥ್ಯದಿಂದ ಅದೂ ಈ ಕಲಾ ಮಾಧ್ಯಮದ 'ಸ್ವರೂಪ'ದಿಂದ ಬಂದದ್ದು. ಈ ಸ್ವರೂಪವೆಂಬುದು ಈ ಕಲೆಯ ಅನಿವಾರ ಆವಶ್ಯಕತೆ. ಮೌಲಿಕ ವಿಚಾರ ವಿಮರ್ಶೆಯಲ್ಲಿ ಔಚಿತ್ಯವಿಚಾರದ ಪ್ರಶ್ನೆ ಬಂದಾಗ, ಶೈಲಿನಿಷ್ಠೆಯೆಂಬುದು ಒಂದು ಮುಖ್ಯ ಪರಿಗಣನೆ. ಅಂದರೆ, ಒಂದು ಪಾತ್ರನಿರ್ವಹಣೆ ಸಮರ್ಪಕವಾಗಿದೆಯೆ? ಎಂದು ಪರಿಶೀಲಿಸುವಾಗ, ಪಾತ್ರಧಾರಿಯ ಪ್ರತಿಭೆ, ಸಾಮರ್ಥ್ಯಗಳ ಜತೆಗೆ ಆತನ ಪಾತ್ರನಿರ್ವಹಣೆಯು ಸೂಕ್ತವಾದ ಗಾನ, ವಾದನಪದ್ಧತಿ ಯಿಂದ, ಯಕ್ಷಗಾನ ವೇಷವಿಧಾನದಿಂದ, ನರ್ತನದಿಂದ, ರಂಗಸ್ಥಳದ 'ಕ್ರಮ'ಗಳಿಂದ, ಅಭಿವ್ಯಕ್ತಿವಿಧಾನದಿಂದ ಮೂಡಿಬಂದಿದೆಯೆ? ಎಂಬುದೂ ಮುಖ್ಯವಾದ ಪ್ರಶ್ನೆಯಾಗುತ್ತದೆ. "ಚೆನ್ನಾಗಿತ್ತು" ಎಂದರೆ, ಏನು ಚೆನ್ನಾಗಿತ್ತು? ಮಾತುಗಾರಿಕೆ ಹೇಗೆ ಸಾಗಿತ್ತು ಎಂದು ಹೇಳುವಾಗ, ಅದು ಪ್ರಸಂಗದ ಪದ್ಯಗಳ ಜಾಡನ್ನು ಬೆಳೆಸಿಕೊಂಡಿದೆಯೆ? ಎಂಬ ಪ್ರಶ್ನೆ ಬರುತ್ತದೆ, ಔಚಿತ್ಯದ ಇತರ ಪ್ರಶ್ನೆಗಳ ಜತೆಗೆ.

ಬಹುವಿಧ ಚೌಕಟ್ಟು

ಶೈಲಿ ಅಥವಾ ಪರಂಪರೆಯೆಂಬ ಒಂದು ಸೀಮೆಯ ಜತೆ ಬೇರೆ ವಲಯಗಳ ಚೌಕಟ್ಟೂ ಕಲೆಗಿರುತ್ತದೆ. ಭಾರತೀಯ ಸಂಸ್ಕೃತಿಯ ದೊಡ್ಡ ಆವರಣ, ಅದರೊಳಗೆ 'ಪೌರಾಣಿಕತೆ'ಯ ಒಂದು ಅಪೇಕ್ಷಿತ ಚೌಕಟ್ಟು, ಅದರೊಳಗೆ ನಾವು ಬೆಳೆಸುವ ಕನ್ನಡ ಯಾ ತುಳು ಭಾಷೆಗಳ ಚೌಕಟ್ಟು, ಪ್ರಾದೇಶಿಕ ಸಂಸ್ಕೃತಿಯ ಪ್ರಭಾವ-ಸ್ವಭಾವ, ಕಲೆಯಲ್ಲಿನ ತಿಟ್ಟುಗಳು- ಹೀಗೆ ಒಂದರೊಳಗೊಂದು ಚೌಕಟ್ಟು ಇರುವ ಚಕ್ರವ್ಯೂಹದೊಳಗೆ ನಾವು ಕಲೆಯನ್ನು ಪರಿಭಾವಿಸಬೇಕಾಗುತ್ತದೆ. ನಾವು ಪೌರಾಣಿಕ ಪಾತ್ರವನ್ನೂ ಚಿತ್ರಿಸುತ್ತೇವೆ ಎಂದರೂ, ನಮ್ಮ ಮಾತಿನ ಕ್ರಮ, ಉದಾಹರಣೆಗಳು, ಅಭಿವ್ಯಕ್ತಿ ಸಂಸ್ಕೃತಿ ನಮ್ಮದೇ, ನಮ್ಮ ಪ್ರದೇಶದ್ದೆ. ನಾವು ಚಿತ್ರಿಸುವ ರಾಮ, ದುದ್ಯೋಧನರು, ಸತ್ಯಭಾಮೆ, ಸೀತೆ, ದ್ರೌಪದಿಯರು ಪೌರಾಣಿಕರಾಗಿರುತ್ತಲೇ ನಮ್ಮ ಕನ್ನಡ-ತುಳು ಪರಿಸರದ ಭಾವವನ್ನು ಸಮನ್ವಯಗೊಳಿಸಿಕೊಂಡಿರುತ್ತಾರೆ.