ಈ ಪುಟವನ್ನು ಪ್ರಕಟಿಸಲಾಗಿದೆ

೧೦೪ / ವಾಗರ್ಥ

ವಿಮರ್ಶಾಪರಂಪರೆ ಸಶಕ್ತವಾಗಿಲ್ಲ. ಅನ್ಯಕ್ಷೇತ್ರಗಳಿಗೆ ಹಲವು ಸಮರ್ಥ ರನ್ನು ನೀಡಿದ, ಯಕ್ಷಗಾನ ಪ್ರದೇಶದಲ್ಲಿ, ಈ ಕ್ಷೇತ್ರದ ಕಡೆ ಬಂದವರ ಸಂಖ್ಯೆ ವಿರಳ. ಇದು ಏಕೆ ಎಂಬುದೂ ಪರಿಶೀಲನಾರ್ಹ, ವಿಮರ್ಶಾರ್ಹ ವಿಚಾರ, ಗಾತ್ರದಲ್ಲಿ ವಿಸ್ತಾರವಾಗಿ, ವೈವಿಧ್ಯಮಯವಾಗಿ ಬೆಳೆದಿರುವ ಯಕ್ಷಗಾನ ರಂಗದ ಬಗ್ಗೆ ಬಂದಿರುವ ವಿಮರ್ಶ ತೀರ ಕಡಿಮೆ. ಈ ಕ್ಷೇತ್ರದ ವಿಮರ್ಶೆಯ ತಾತ್ವಿಕ ವಿವೇಚನೆ ಆಗಿಲ್ಲ. ಹಾಗಾಗಿ, ಯಕ್ಷಗಾನ ವಿಮರ್ಶಾ ಶಾಸ್ತ್ರ ಬೆಳೆದಿಲ್ಲ. ಅದು ಬೆಳೆದಿದ್ದರೆ, ಯಕ್ಷಗಾನ ಇಂದು ಇರುವಂತೆ ಇರುತ್ತಿರಲಿಲ್ಲ. ಎಷ್ಟೋ ಉತ್ತಮವಾಗಿರುತ್ತಿತ್ತು. ಯಕ್ಷಗಾನ ರಂಗಕ್ಕೆ ಬೇಕಾದ ಮಾರ್ಗದರ್ಶನವನ್ನು ಒದಗಿಸಲು ವಿಮರ್ಶಕರು ವಿಫಲರಾಗಿದ್ದಾರೆ. ಈ ಸೋಲನ್ನು ನಾವು ಒಪ್ಪಿಕೊಳ್ಳ ಬೇಕು. ಇದರಿಂದಾಗಿ, ವಿಮರ್ಶೆಗೆ ಮುಕ್ತವಾಗಿ ಒಡ್ಡಿಕೊಳ್ಳಲು ಯಕ್ಷಗಾನರಂಗ ಇನ್ನೂ ಸಿದ್ಧವಾಗಿಲ್ಲ. ವಿಮರ್ಶೆ, ಗೋಷ್ಠಿ ಎಂದರೆ, ಅದೇನೋ ತಮ್ಮನ್ನು ಟೀಕಿಸುವಂತಹ ಉದ್ದೇಶದ್ದು ಎಂದೇ ಕಲಾವಿದರು ತಿಳಿದಿರುವಂತೆ ಕಾಣುತ್ತದೆ. ಈ ಸಂದೇಹವನ್ನು ನಿವಾರಿಸಲು ನಾವು ಯತ್ನಿಸಬೇಕು.

ಯಾವುದೇ ವಿಮರ್ಶೆಗೆ, ಮಾನದಂಡಗಳ ನಿರ್ಮಾಣ, ಮೌಲಿಕ ಕೆಲಸ. ಪ್ರಸಂಗವೊಂದನ್ನು ವಿಮರ್ಶಿಸುವುದು ಹೇಗೆ? ಸಾಹಿತ್ಯ, ಹಾಡುಗಬ್ಬ, ನಾಟಕಗಳ ವಿಮರ್ಶಾ ತತ್ವಗಳನ್ನೊಳಗೊಂಡು ಮತ್ತು ಅದನ್ನು ಮೀರಿದ ಅಂಶಗಳನ್ನು ಗಣಿಸಿ, ಒಂದು ಪ್ರಸಂಗಕೃತಿಯನ್ನು ಬೆಲೆಗಟ್ಟುವುದಕ್ಕೆ ಬೇಕಾದ ಮೂಲತತ್ವಗಳ ನಿರೂಪಣೆ ಆಗಿಲ್ಲ. ಹಾಗೆಯೇ ಅರ್ಥಗಾರಿಕೆ, ಕುಣಿತ, ರಂಗಸಂಪ್ರದಾಯ, ನಿರ್ದೇಶನ, ಭಾಗವತಿಕೆಗಳ ಬಗೆಗಿನ ವಿಮರ್ಶೆಗೂ ಮೌಲಿಕ ಸೂತ್ರಗಳ ರಚನೆ ಆಗಬೇಕಷ್ಟೆ, ಯಕ್ಷಗಾನದ ರಂಗಭಾಷೆಯನ್ನು ತಿಳಿಸುವ, ಅದರ ಅಂಗೋಪಾಂಗಗಳ ಪ್ರಾಥಮಿಕ ವಿವರಣೆ ನೀಡುವ ಪಠ್ಯಗಳೂ ನಮ್ಮಲ್ಲಿಲ್ಲ. ಪ್ರದರ್ಶನಗಳ ವಿಮರ್ಶೆಯಾಗಿರುವುದಂತೂ ತೀರ ಕಡಿಮೆ.

ವಾಸ್ತವ - ಅವಾಸ್ತವ

ನಮ್ಮ ಓದುವಿಕೆ, ನಾವು ದಿನಬಳಕೆಯಲ್ಲಿ ನೋಡುವ ಮಾಧ್ಯಮ ಗಳು, ಅನುಭವಗಳು- ಇವುಗಳ ಸಂಸ್ಕಾರದಿಂದ ನಮ್ಮ ದೃಷ್ಟಿ ವಾಸ್ತವತೆಯ ನೆಲೆಯಲ್ಲಿ ಉಚಿತ, ಅನುಚಿತಗಳನ್ನು ಭಾವಿಸುತ್ತದೆ.