ಯಕ್ಷಗಾನದ ವಾಚಿಕಾಭಿನಯ: ಅಭಿವ್ಯಕ್ತಿ ಮತ್ತು ತಂತ್ರ
೧
ನೃತ್ಯ, ಸಂಗೀತ, ವೇಷ, ಸಾಹಿತ್ಯ, ರಂಗತಂತ್ರ ಮತ್ತು ಕಥೆಯ ನಾಟಕೀಯ ನಿರೂಪಣೆಗಳೆಂಬ ಅಂಗಗಳಿಂದ ಕೂಡಿ, 'ಸಮಗ್ರ ರಂಗ ಭೂಮಿ' ಎಂಬ ಅಭಿಧಾನಕ್ಕೆ ಅರ್ಹವಾಗಿರುವುದು ಭಾರತದ ಹೆಚ್ಚಿನ ಸಾಂಪ್ರದಾಯಿಕ ರಂಗಪ್ರಕಾರಗಳ ಸಾಮಾನ್ಯ ಸ್ವರೂಪ. ಈ ಅಂಗಗಳಲ್ಲಿ ಒಂದೊಂದು ಪ್ರಕಾರದಲ್ಲಿ ಒಂದೊಂದು ಅಂಗಕ್ಕೆ ಹೆಚ್ಚಿನ ಮಹತ್ವ ಸಂದಿರುವುದೂ ಉಂಟು (ಉದಾ: ಕಥಕಳಿಯಲ್ಲಿ ಆಂಗಿಕ ಅಭಿನಯ), ಕೆಲವು ಪ್ರಕಾರಗಳಲ್ಲಿ ಒಂದು ಅಂಗವು ನಾಮಮಾತ್ರವಾಗಿರುವುದೂ ಉಂಟು (ಉದಾ: ತೆರುಕ್ಕೂತ್ತಿನಲ್ಲಿ ಮಾತುಗಾರಿಕೆ), ಮೇಲೆ ಹೇಳಿದ ಎಲ್ಲ ಅಂಗಗಳೂ, ಒಳ್ಳೆಯ ಬೆಳವಣಿಗೆಯನ್ನೂ, ಸಮತೋಲವಾದ ಮಿಶ್ರಣವನ್ನೂ ಸಾಧಿಸಿರುವ ರಂಗಪ್ರಕಾರವೆಂದರೆ, ಕರಾವಳಿಯ ಯಕ್ಷಗಾನ ರಂಗಭೂಮಿಯೆಂದು ಹೇಳಬಹುದು. ಯಕ್ಷಗಾನದ ಮಾತುಗಾರಿಕೆಯ ಅಭಿವ್ಯಕ್ತಿ ಸ್ವರೂಪ ಮತ್ತು ತಂತ್ರ ಅರ್ಥಾತ್ ಪ್ರಯೋಗ ವಿಧಾನವನ್ನು ವಿವರಿಸುವುದು, ಈ ಪ್ರಬಂಧದ ಉದ್ದೇಶ. ಇದು ಮುಖ್ಯವಾಗಿ ವಿವರಣಾತ್ಮಕ ಪ್ರಬಂಧವಾದುದರಿಂದ, ಮಾತು ಗಾರಿಕೆಯ ವಿವರಗಳ (content) ಸೂಕ್ಷ್ಮ ಮತ್ತು ಸೃಜನಶೀಲ ಅಂಶ ಗಳನ್ನು ಹೆಚ್ಚು ಪರಿಗಣಿಸಿಲ್ಲ.
೨
ಯಕ್ಷಗಾನ ರಂಗಪ್ರಯೋಗ ಅರ್ಥಾತ್ ಪ್ರದರ್ಶನದಲ್ಲಿ ಬರುವ ವಾಚಿಕಾಂಶಕ್ಕೆ (ಹಾಡುಗಳನ್ನು ಹೊರತುಪಡಿಸಿ) ಮಾತು, ಮಾತುಗಾರಿಕೆ, ಅರ್ಥ, ಅರ್ಥ ಹೇಳುವುದು, ಅರ್ಥ ಮಾತಾಡುವುದು- ಮೊದಲಾದ ಹೆಸರುಗಳಿವೆ. ಯಕ್ಷಗಾನದ ವಾಚಿಕವನ್ನೆಲ್ಲ ಮಾತು ಎಂದು ತೆಗೆದು ಕೊಂಡಾಗ ಗಮನಿಸಬೇಕಾದ ಒಂದು ಅಂಶವೆಂದರೆ, ಯಕ್ಷಗಾನದ 'ಮಾತು' ಎಲ್ಲವೂ 'ಅರ್ಥ' ಅಲ್ಲ. ಅರ್ಥವೆಲ್ಲವೂ ಮಾತು ಹೌದು. ಅಂದರೆ 'ಅರ್ಥ'ವೆನಿಸದಿರುವ, ಮಾತು ಮಾತ್ರ ಆಗಿರುವ ಅಂಶಗಳೂ ಇವೆ. ಸಂಪ್ರದಾಯವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಇದು