ಈ ಪುಟವನ್ನು ಪ್ರಕಟಿಸಲಾಗಿದೆ

೨ / ವಾಗರ್ಥ
ಅನುಭವಕ್ಕೆ ಬರುತ್ತದೆ. ಕಥಾಭಾಗದ ಪ್ರದರ್ಶನದಲ್ಲಿ, ಪಾತ್ರಗಳು ಆಡುವ ಮಾತು, 'ಅರ್ಥ'ವೆನಿಸುತ್ತದೆ. ಉಳಿದಂತೆ, ಪೂರ್ವರಂಗದಲ್ಲಿ ಬರುವ ಪಾತ್ರಗಳ ಮಾತುಗಳು, ಭಾಗವತನು ಪೂರ್ವರಂಗದಲ್ಲೂ, ಕಥಾಪ್ರದರ್ಶನದಲ್ಲೂ ಆಡುವ ಮಾತುಗಳು, ಮಾತುಗಳು ಹೊರತು ಅರ್ಥವೆನಿಸುವುದಿಲ್ಲ. ಎಂದರೆ, ಯಕ್ಷಗಾನದ ಮಾತುಗಾರಿಕೆಯನ್ನು ಎರಡು ವಿಧವಾಗಿ ವಿಂಗಡಿಸಬಹುದು: ಆಚರಣಾತ್ಮಕ ಮತ್ತು ಪ್ರದರ್ಶನಾತ್ಮಕ. ಇನ್ನೊಂದು ರೀತಿಯಲ್ಲಿ, ಕಥಾಪಾತ್ರಗಳ ಮಾತುಗಳು ಮತ್ತು ಕಥಾಪಾತ್ರಗಳಲ್ಲದವರ ಮಾತುಗಳು. ಕಥಾಪಾತ್ರಗಳ ಮಾತುಗಳನ್ನು 'ಅರ್ಥ' ಎಂದು ಹೇಳುವುದೇಕೆಂದರೆ, ಅವು ಪ್ರಸಂಗವೆಂಬ ಆಧಾರ ಪಠ್ಯದ ಪದ್ಯಗಳನ್ನು ಆಧರಿಸಿ, ಅವುಗಳಿಗೆ ಸಂಬಂಧಿಸಿ ಆಡುವ ಮಾತುಗಳೆಂದು ಭಾವ, ಪೂರ್ವರಂಗ, ಆಟದ ಮುಕ್ತಾಯಗಳಲ್ಲಿ ಬರುವ ಮಾತುಗಳು ಪದ್ಯಗಳ 'ಅರ್ಥ'ಗಳಲ್ಲ, 'ಅನುವಾದ'ಗಳಲ್ಲ. ಅವು ಒಂದು ಮಟ್ಟದಲ್ಲಿ ಪದ್ಯದಲ್ಲಿ ಹೇಳಿದ ವಿಷಯಗಳಿಗಿಂತ ಬೇರೆಯಾದವುಗಳು

ಈ ನಿಟ್ಟಿನಲ್ಲಿ, ಪೂರ್ವರಂಗವನ್ನು ಪರಿಶೀಲಿಸೋಣ. ಮೊದಲಾಗಿ, ಚೌಕಿ (ಬಣ್ಣದ ಮನೆ)ಯಲ್ಲಿ, ದೇವರ ಪೂಜೆಯ ಹಾಡುಗಳಾದ ಮೇಲೆ, ಆರತಿ ಎತ್ತಿದವನು ಪ್ರಸಾದವನ್ನು ವಾದ್ಯಗಳಿಗೂ, ಹಾಡುಗಾರ, ಹಿಮ್ಮೇಳದವರಿಗೂ ಕೊಟ್ಟಾಗ, 'ರಂಗಸ್ಥಳಕ್ಕೆ ಅಪ್ಪಣೆಯ?” ಎಂದು ಹಾಡುಗಾರನು ವಿಚಾರಿಸಬೇಕು. ಆಗ ಪ್ರಸಾದ ವಿತರಕನು (ಅವನೇ ಅರ್ಚಕ, ಅರ್ಚಕನೆಂದರೆ, ಹಿಂದೆ ಪ್ರತ್ಯೇಕ ಪೂಜಾರಿಯಿಲ್ಲ. ಚೌಕಿ ಯಲ್ಲಿದ್ದ ಯಾರಾದರೊಬ್ಬರು ಆ ಕೆಲಸ ಮಾಡುತ್ತಿದ್ದರು.) 'ದೇವರ ಅಪ್ಪಣೆ' ಅನ್ನಬೇಕು. ಇದಾದ ಬಳಿಕ, ಭಾಗವತರು, ಹಿಮ್ಮೇಳ ಮತ್ತು ವೇಷಧಾರಿಗಳು ಎಲ್ಲರೂ ಒಂದಾಗಿ ರಂಗಸ್ಥಳಕ್ಕೆ 'ಪರಾಕು' ಹೇಳುತ್ತ ಹೋಗಬೇಕು. 'ಕಸ್ತೂರಿಕೋಲಾಹಲೋ ಬಹುಪರಾಕ್, ಧೀರ ವಯ್ಯಾರೋ ಬಹುಪರಾಕ್, ಶರಧಿಗಂಭೀರೋ ಬಹುಪರಾಕ್' ಎಂಬ ಪರಾಕು ವಚನಗಳಿರುತ್ತವೆ. ಇವಿಷ್ಟು ಸಭಾಲಕ್ಷಣ, ಅರ್ಥಾತ್, ಪೂರ್ವರಂಗದ ಆರಂಭಕ್ಕೆ ಮೊದಲು ಬರುವ ಮಾತಿನ ಅಂಶಗಳು.