ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನದ ವಾಚಿಕಾಭಿನಯ : ಅಭಿವ್ಯಕ್ತಿ ಮತ್ತು ತಂತ್ರ / ೯

ಸಹಕಲಾವಿದನಿಂದ ಸಿಗುವ ಪ್ರೇರಣೆ, ಸಾಮಾಜಿಕ ಮತ್ತು ಪ್ರದರ್ಶನದ ಸಂದರ್ಭ, ಪ್ರೇಕ್ಷಕರ ನಿರೀಕ್ಷೆ-ಪ್ರತಿಕ್ರಿಯೆ ಇವು ಪೂರಕ ಆಧಾರಗಳು. ಅರ್ಥಗಾರಿಕೆಯಲ್ಲಿ- ಪೀಠಿಕೆ, ಸ್ವಗತ, ಸಂವಾದಗಳೆಂಬುವು ಅದರ ಮುಖ್ಯ ಅಂಗಗಳು. ಎತ್ತುಗಡೆ, ಸ್ವರವಿನ್ಯಾಸ, ಉದ್ಗಾರಗಳ, ಬಳಕೆ ಮೊದಲಾದುವು ತಾಂತ್ರಿಕ ಅಂಶಗಳು. ಕಲ್ಪನೆ, ಉದ್ಧರಣ, ಆಕರಗಳ ಸಾಮಗ್ರಿ ಅಳವಡಿಕೆ, ಪೂರಕ ಆಂಗಿಕ ಅಭಿನಯ, ಚಲನೆ- ಇವುಗಳು ಅರ್ಥಗಾರಿಕೆಯ ವ್ಯಂಜನಗಳು. ಇವೆಲ್ಲವುಗಳ ಸಪ್ರಮಾಣವಾದ ಬಳಕೆ ಯಿಂದ ಉತ್ತಮ ಅರ್ಥಗಾರಿಕೆ ರೂಪುಗೊಳ್ಳುತ್ತದೆ.

ಅರ್ಥಗಾರಿಕೆಯ ಯಶಸ್ಸಿಗೆ ಒಂದು ಆವಶ್ಯಕ ಅಂಶವೆಂದರೆ, ಪಾತ್ರಧಾರಿಯ ಸ್ವರ. ತೂಕ, ಕಾಂತಿ, ಭಾವಾಭಿವ್ಯಕ್ತಿಸಾಮರ್ಥ್ಯ ಮತ್ತು ಆಕರ್ಷಣೆ, ಆ ಸ್ವರಕ್ಕಿರಬೇಕಾದ ಗುಣಗಳು. ಅಲ್ಲದೆ ಸ್ವರಸ್ವಭಾವವು ಪಾತ್ರಸ್ವಭಾವಕ್ಕೆ ಸೂಕ್ತವಾಗಿ ಹೊಂದಿಕೊಳ್ಳುವುದೂ ಅಪೇಕ್ಷಿತ. ಉದಾ: ಕೆಲವರಿಗೆ ರಾಮ, ಕೃಷ್ಣಾದಿ ಪಾತ್ರಗಳಿಗೆ ಹೊಂದುವ ಸ್ವರವಿರುತ್ತದೆ. ಅಂತಹವರಿಗೆ ಕೌರವ, ಮಾಗಧರಂತಹ ಪಾತ್ರಗಳನ್ನು ನೀಡುವ ಕ್ರಮವಿಲ್ಲ. ಹಲವು ರೀತಿಯ ಪಾತ್ರಗಳಿಗೆ ಒಗ್ಗುವ ಸ್ವರವಿದ್ದರೆ ಅದು ತುಂಬ ಯೋಗ್ಯ, ಸ್ತ್ರೀಪಾತ್ರಗಳಿಗಂತೂ ಪ್ರತ್ಯೇಕ ಸ್ವರಯೋಗ್ಯತೆ ಬೇಕು.

ಅರ್ಥಗಾರಿಕೆಯನ್ನು, ಅಂದರೆ ಯಕ್ಷಗಾನದ ಮಾತನ್ನು ಆಡುವಾಗ, ಅದರ ಹೇಳುವಿಕೆಯಲ್ಲಿ ಒಂದು ಬಗೆಯ ಶೈಲೀಕೃತ-ನಾಟಕೀಯ ಸ್ವರಮಂಡನೆ (delivery), ತುಸು ಕೃತಕವೆನಿಸುವ ಮಾತಿನ ರೀತಿ ಇರಬೇಕು. ಅರ್ಥಾತ್ ಅರ್ಥಗಾರಿಕೆಯ ಸ್ವರ ದಿನಬಳಕೆಯ 'ಲೋಕ ಧರ್ಮಿ' ಸ್ವರವಲ್ಲ. ಇದನ್ನೆ ಕೆಲವರು ಅರ್ಥಗಾರಿಕೆಯ 'ಶ್ರುತಿ' ಅಥವಾ 'ಶ್ರುತಿಯಲ್ಲಿ ಮಾತಾಡುವುದು' ಅನ್ನುತ್ತಾರೆ. ಆದರೆ ಪ್ರಾಯಃ ಇದು ಸಂಗೀತದ ಹಾಡುವಿಕೆಯ ಶ್ರುತಿಬದ್ಧತೆ ಅಲ್ಲ. ಮಾತಿನ ಸ್ವರದ ಅಂದವನ್ನು 'ಶ್ರುತಿಮೈತ್ರಿ' ಅನ್ನಬಹುದೇನೋ.

ಪೀಠಿಕೆ ಎಂಬುದು ಪಾತ್ರವು ತನ್ನ ಮೊದಲ ಪ್ರವೇಶದಲ್ಲಿ ಆಡುವ ಸ್ವಗತ. ವಿಶಿಷ್ಟ ಸಂದರ್ಭದಲ್ಲಿ ಒಂದು ಪಾತ್ರಕ್ಕೆ ಒಂದಕ್ಕಿಂತ ಹೆಚ್ಚು ಪೀಠಿಕೆ ಇರುವುದಾದರೂ, (ಉದಾ: ಕೃಷ್ಣಸಂಧಾನದ ಕೃಷ್ಣ) ಪಾತ್ರ ವೊಂದಕ್ಕೆ ಪೀಠಿಕೆ ಒಂದೇ. ಈ ಪೀಠಿಕೆಯೆಂಬುದು ಪಾತ್ರ ಪರಿಚಯ,