ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನದ ವಾಚಿಕಾಭಿನಯ : ಅಭಿವ್ಯಕ್ತಿ ಮತ್ತು ತಂತ್ರ / ೧೫

ಯಕ್ಷಗಾನ ಪ್ರದರ್ಶನದಲ್ಲಿ, ಪದ್ಯವು ಪಾತ್ರಧಾರಿಯ ಮೂಲಕ 'ಅರ್ಥ'ವಾಗಿ ಮಾರ್ಪಡುವ ಪ್ರಕ್ರಿಯೆ ಸಂಕೀರ್ಣವಾದುದು. ಮಾತಿನ ಆಧಾರಪಠ್ಯವಾದ ಪ್ರಸಂಗವು, ಹಾಡುಗಾರಿಕೆ-ಹಿಮ್ಮೇಳಗಳ ಮೂಲಕ ಸಂಗೀತ ಪಠ್ಯವಾಗುವಾಗ, ಅದರ ರೂಪಾಂತರವಾಗುತ್ತದೆ. ಜೊತೆಗೆ ಅರ್ಥಾಂತರವೂ ಆಗುತ್ತದೆ. ಸಂಗೀತ ಮೂಲಕ, ಪ್ರಸಂಗ ಸಾಹಿತ್ಯವು ಸಂವಹನಗೊಂಡಾಗಲೆ, ರಾಗ, ತಾಳ, ಭಾವಗಳ ಮೂಲಕ ಅದು ಬೇರೆ ಅರ್ಥವನ್ನು ಪಡೆಯುತ್ತದೆ. ಅದನ್ನಾಧರಿಸಿದ ಮಾತು, ಅರ್ಥ ರೂಪು ಗೊಳ್ಳುವಾಗ, ಒಂದು ಪಠ್ಯಕ್ಕೆ, ಅನಂತ 'ಅನುಪಠ್ಯ'ಗಳ ರಚನೆ ಆಗುತ್ತದೆ.

ಪ್ರಸಂಗದ ಅರ್ಥವು ಅದರಲ್ಲಿರುವ ಪದ್ಯಗಳ ಶಬ್ದಗಳನ್ನಾಧರಿಸಿ ಅದರೊಳಗಿರುತ್ತದೆ. ಆದರೆ ಅದು ಅಲ್ಲಿ ಮಾತ್ರ ಇರುವುದಲ್ಲ. ಅದು ಕಲಾವಿದನೊಳಗೆ ಇದೆ. ಅರ್ಥಗಾರಿಕೆ ಎಂದರೆ, ಕಲಾವಿದನಿಗೆ ಆಗುವ ಅರ್ಥ; ಅವನು ಮಾಡುವ ಅರ್ಥೈಸುವಿಕೆಯನ್ನು ಆಧರಿಸಿದೆ. ಪದ್ಯವು ನೀಡುವುದು ಕಥಾರೇಖೆ ಮತ್ತು ಸ್ಕೂಲವಾದ ವಸ್ತುವಿನ್ಯಾಸ ಮಾತ್ರ. ಅದು ಪಾತ್ರಧಾರಿಯ ಮೂಲದ್ರವ್ಯ, ಕಚ್ಚಾವಸ್ತು, ಅದನ್ನು ಪಾತ್ರಧಾರಿ ಗಳು ಬೆಳೆಸುತ್ತಾರೆ, ವಿಸ್ತರಿಸುತ್ತಾರೆ. ಇನ್ನೊಂದು ರೀತಿಯಲ್ಲಿ ಹೇಳುವು ದಾದರೆ, ಪ್ರಸಂಗದ ಪದ್ಯಗಳನ್ನಷ್ಟೆ ಓದಿದಾಗ, ಅವು ರಂಗದಲ್ಲಿ ತಾಳುವ ವಾಙ್ಮಯ ರೂಪವಿನ್ಯಾಸವನ್ನು ಊಹಿಸಲು ಸಾಧ್ಯವಿಲ್ಲದಷ್ಟು, ಅರ್ಥಗಾರಿಕೆಯು ಬೆಳೆದಿದೆ.

ಅರ್ಥವೆಂಬ ಮಾತುಗಾರಿಕೆ, “ಪದ್ಯದ ಸೀಮೆಯೊಳಗಿರಬೇಕು. ಪ್ರಸಂಗವನ್ನು ಮೀರಬಾರದು” ಎಂಬುದು ಅಂಗೀಕೃತ ಸಾಮಾನ್ಯ ನಿಯಮ. ಆದರೆ, ಅದು ಪದ್ಯದ ಕೇವಲ ಅನುವಾದವೂ ಆಗಬಾರದು. ಅರ್ಥಾತ್ ಅರ್ಥವು ಪದ್ಯವನ್ನು ಮೀರಿ ಹೋದಾಗಲೇ ಸೃಷ್ಟಿಶೀಲವಾಗು ವುದು. ಹಾಗಾಗಿ ಅದು ಪದ್ಯವನ್ನು 'ಮೀರದೆ, ಮೀರಬೇಕು'. ಇದೇ ಅದರ ವೈಶಿಷ್ಟ್ಯ, ರಹಸ್ಯ. ಪ್ರಸಂಗದ, ಪದ್ಯಗಳ, ಅಲ್ಲಿಯ ಶಬ್ದಗಳ ಒಟ್ಟು ನಡೆಗೆ ಅವಿರೋಧವಾಗಿ, ತನ್ನ ಕಲ್ಪನೆ, ಪಾಂಡಿತ್ಯ, ನಾಟಕೀಯ ಕೌಶಲಗಳನ್ನು ಅಳವಡಿಸಿ ಮಾತಿನ ರಚನೆ ಮಾಡುವುದು ಅರ್ಥ ಗಾರಿಕೆಯ ವಿಸ್ತರಣ ಔಚಿತ್ಯ.