ಈ ಪುಟವನ್ನು ಪ್ರಕಟಿಸಲಾಗಿದೆ
ತಾಳಮದ್ದಳೆಯ ಕ್ರಿಯಾತ್ಮಕತೆ/ ೩೯

ಸ್ವಂತ ಕಲ್ಪನೆ, ವಿಸ್ತಾರ ಮತ್ತು ಭಾವಗಳೊಂದಿಗೆ, ಸಂವಾದ, ಪ್ರಶೋತ್ತರಗಳಂತೂ ಪ್ರಸಂಗದ ಪದ್ಯಗಳ ಸೀಮೆಯನ್ನು ಎತ್ತೆತ್ತಲೋ ಒಯ್ದುಬಿಡುತ್ತವೆ. ಕ್ಷಣಕ್ಷಣಕ್ಕೂ ಪ್ರೇಕ್ಷಕನ ನಿರೀಕ್ಷೆ, ಕುತೂಹಲಗಳು ಜಾಗೃತವಾಗಿರುತ್ತವೆ. ಪ್ರತಿಭೆಯ ವಿಲಾಸ ಅಸಾಧಾರಣವಾಗಿರುತ್ತದೆ. ಇದರಿಂದಾಗಿ ಪ್ರೇಕ್ಷಕನ ಭಾಗವಹಿಸುವಿಕೆಯು ಅತ್ಯಂತ ಸಕ್ರಿಯವಾಗಿರು ತ್ತದೆ. ಜತೆಗೆ ಪ್ರೇಕ್ಷಕನ ಪ್ರತಿಕ್ರಿಯೆಗಳು, ಆಶುಭಾಷಣ ರೂಪದ ಈ ರಂಗಭೂಮಿಯ ಮೇಲೆ ಪರಿಣಾಮ ಮಾಡುತ್ತಲೇ ಇರುತ್ತವೆ. ಈ ಅಂಶವು ಅನ್ಯರಂಗಭೂಮಿಗಳಲ್ಲೂ ಇದ್ದರೂ, ಇಷ್ಟು ಸಶಕ್ತವಾಗಿ, ಇಷ್ಟು ಪ್ರಮಾಣದಲ್ಲಿ ಇಲ್ಲವೆನ್ನಬಹುದು. ಕಾರಣ, ಇಲ್ಲಿನ ಮಾತು ಸ್ವತಂತ್ರ, ಪ್ರೇಕ್ಷಕರ ಒಂದು ಚಪ್ಪಾಳೆ, ನಾಟಕದ ಪಠ್ಯವನ್ನೆ ಪ್ರಭಾವಿಸ ಬಲ್ಲುದು. ಪ್ರೇಕ್ಷಕನಿಗೂ ರಂಗಸ್ಥಳಕ್ಕೂ ಸತತವಾದ ಕೊಡುಕೊಳುಗೆ ಇಲ್ಲಿ ಸಹಜವೆಂಬಂತೆ ಜರಗುತ್ತಿರುತ್ತದೆ.

ಇದೇ ಕೊಡುಕೊಳುಗೆಯ ಪ್ರಕ್ರಿಯೆಯು ಪ್ರದರ್ಶನದ ಅನಂತರವೂ ಮುಂದುವರಿದು, ಪ್ರೇಕ್ಷಕರಲ್ಲಿ ಚರ್ಚೆಗಳಾಗಿ ಪರಿವರ್ತಿತವಾಗುತ್ತದೆ. ಓರ್ವ ಕಲಾವಿದನ ಪಾತ್ರಾಭಿವ್ಯಕ್ತಿ, ವಾದಮಂಡನೆ ಎಷ್ಟು ಸರಿ, ಪಾತ್ರೋಚಿತವೆ, ಅದರಲ್ಲೇನು ಹೊಸತನವಿತ್ತು ಮೊದಲಾಗಿ ಮೌಖಿಕ ವಿಮರ್ಶೆ ಸಾಗುತ್ತದೆ. 'ಆ' ಕಲಾವಿದನ ಕರ್ಣನ ಪಾತ್ರ. ಮೊನ್ನೆ ಹೇಗೆ, ನಿನ್ನೆ ಹೇಗಿತ್ತು, 'ಆ' ಕಲಾವಿದನ ಕೃಷ್ಣನ ಪಾತ್ರಕ್ಕೂ, ಮತ್ತೊಬ್ಬ ಕಲಾವಿದನದಕ್ಕೂ ಏನು ವ್ಯತ್ಯಾಸ, ಅವನ ಎದುರಾಳಿಗಳ ಪ್ರತಿಕ್ರಿಯೆಗಳು ಇಲ್ಲಿ ಹೇಗೆ ಕೆಲಸಮಾಡಿದುವು. ಈ ಕಲಾವಿದನ ವಿಷಯಸಂಗ್ರಹದ ಆಕರಗಳಾವುವು ಅವನ ಅಧ್ಯಯನ ಅಭಿವ್ಯಕ್ತಿಗಳ ಸಂಬಂಧವೇನು ಮೊದಲಾದ ವಿಚಾರಗಳೂ, ಚರ್ಚಿತವಾಗುತ್ತವೆ. ಅವು ಕ್ರಮಶಃ ಕಲಾವಿದರಿಗೆ ತಲುಪಿ, ಕಲಾವಿದನ ಮೇಲೆಯೂ ಪರಿಣಾಮ ಬೀರಿ ಅವನಿಗೆ ಚಾಲನೆ ನೀಡುತ್ತವೆ. ಕೆಲವೊಮ್ಮೆ ಕಲಾವಿದರೊಳಗೆ ಬಿರುಸಿನ, ವಿರಸದ ವಾಗ್ವಾದಗಳಾದಾಗ ಅವೂ ಚರ್ಚೆಯ ವಸ್ತುಗಳಾಗುತ್ತವೆ. ಹೀಗೆ ಪ್ರದರ್ಶನ ಕೇಂದ್ರಿತ ಮತ್ತು ಕಲಾವಿದ ಕೇಂದ್ರಿತ ವಿಮರ್ಶೆಗಳು ಈ ರಂಗದ ಕ್ರಿಯಾತ್ಮಕತೆಯ ಮಹತ್ವದ ಅಂಶಗಳಾಗುತ್ತವೆ; ತಾಳಮದ್ದಳೆ ರಂಗವನ್ನು ಮೀರಿ ಜನರಲ್ಲಿ ಬೆಳೆಯುತ್ತದೆ. ಪ್ರಸಂಗದ ಕಥೆ ಗೌಣವಾಗಿ, ಅದರ ಕಲೆ ಪ್ರಾಶಸ್ತ್ಯ ಗಳಿಸುತ್ತದೆ.