೩೮ / ವಾಗರ್ಥ
ಸಾಕಷ್ಟು ಅವಲಂಬಿಸಿ ನಡೆಯುವುದರಿಂದಲೂ, ನೃತ್ಯ ಮತ್ತು ವೇಷಗಳು ಇಲ್ಲದಿರುವುದರಿಂದಲೂ, ತಾಳಮದ್ದಳೆಗೆ ಇರುವ 'ಆವರಣ ಬಂಧನ'ವು 'ಆಟ'ಕ್ಕೆ ಇರುವಂತಹದಲ್ಲ. (ವೇಷ ನೃತ್ಯಸಹಿತವಾದ ಯಕ್ಷಗಾನ ಪ್ರದರ್ಶನವು 'ಆಟ', ತಾಳಮದ್ದಳೆಯು 'ಕೂಟ'ವೆನಿಸಿದೆ). ಇಲ್ಲಿ ವಸ್ತುವಿನ ಅರ್ವಾಚೀನ-ಪ್ರಾಚೀನ 'ಸಂಚಾರವು' ಕಲಾತ್ಮಕವಾಗಿದ್ದಲ್ಲಿ ಸಹಜವಾಗಿರುವುದು. ಉದಾಹರಣೆಗೆ ವಾಲಿಯಂತಹ ಪಾತ್ರವಾಗಲಿ, ದುರ್ಯೋಧನನಂತಹ ಪಾತ್ರವಾಗಲಿ ಸಮಕಾಲೀನ ರಾಜಕಾರಣಿಯೊಬ್ಬನ ನಿಲುವನ್ನು ನೆನಪಿಸಿಕೊಂಡು "ನನ್ನನ್ನು ಉರುಳಿಸಲು ಯತ್ನಿಸುತ್ತಿದ್ದಾರೆ. ಅದು ಆಗದ ಮಾತು. ನನಗೆ ಯಮನಬಲವಿದೆ ಎಂದರೆ ಅದು ಅಸಹಜವೆನಿಸದು. ಸಮಕಾಲೀನ ಧ್ವನಿಯು ತಾಳಮದ್ದಳೆಯ ಜೀವಂತಿಕೆಯ ಲಕ್ಷಣವೂ, ಆವಶ್ಯಕ ಅಂಶವೂ ಆಗಿದೆ. (ಇಲ್ಲಿ ಔಚಿತ್ಯವೂ, ಶಿಲ್ಪ ಸಮನ್ವಯವೂ ಬೇಕು ಎಂಬುದು ಬೇರೆ ವಿಚಾರ). ತೀರ ಸ್ಥಳೀಯವಾದ, ತಾಳಮದ್ದಳೆ ಆಗುತ್ತಿರುವ ಸಂದರ್ಭದ ಘಟನೆ ಕೂಡ ಇಂತಹ ಸ್ಫೂರ್ತಿಗಳನ್ನು ನೀಡುತ್ತವೆ.
ತಾಳಮದ್ದಳೆಯು ಪ್ರಚಲಿತವಿರುವ ಕರ್ನಾಟಕ ಕರಾವಳಿಯ ಆಡು ಮಾತು ಗ್ರಾಂಥಿಕ ಭಾಷೆಯ ಕಿಂಚಿತ್ ಪರಿವರ್ತಿತ ರೂಪವಾದುದರಿಂದ ಅದು ಯಕ್ಷಗಾನದಂತಹ ಶೈಲೀಕೃತ ಕಲೆಗೆ ಸಹಜವಾಗಿ ಹೊಂದಿಕೆ ಯಾಗಿದೆ. ಆದರೆ ಅದರಲ್ಲಿ ಆಡುನುಡಿಯ ಸೊಗಸೂ ತನ್ನದೆ ಆದ ರೀತಿಯಿಂದ ಇದೆ. ಈ ಭಾಷಾಸ್ವರೂಪವು ಯಕ್ಷಗಾನದ ಮಾತುಗಾರಿಕೆಗೆ ವಿಶಿಷ್ಟವಾದ ಸಂವಹನ ಆಯಾಮವನ್ನು ನೀಡಿದೆ. ಅಲ್ಲದೆ, ತಾಳ, ಮದ್ದಳೆಯು ವೇಷವಿಲ್ಲದೆ, ಕುಳಿತುಕೊಂಡು ಮಾತನಾಡುವ ಪಾತ್ರಗಳ ಸಂವಾದ ರೂಪದಲ್ಲಿರುವುದರಿಂದ ಶ್ರೋತೃವಿಗೆ ಒಂದು ಬಗೆಯ ಆತ್ಮೀಯ ಸಾಮೀಪ್ಯವನ್ನು ನೀಡುತ್ತದೆ. ನಮ್ಮೆದುರು ಚಾವಡಿಯಲ್ಲಿ ಕುಳಿತೇ ಪಾತ್ರಗಳು, ಪೌರಾಣಿಕ ಲೋಕವನ್ನು ಚಿತ್ರಿಸುವ ಈ ಅನುಭವವು, ಸಂವಹನ ದೃಷ್ಟಿಯಿಂದ ವಿಲಕ್ಷಣ ಸ್ವರೂಪದ್ದಾಗಿದೆ.
ಪದ್ಯಗಳ ಸ್ಥೂಲ ಚೌಕಟ್ಟು ಪ್ರದರ್ಶನಕ್ಕೆ ಇದ್ದರೂ, ಅದು ಅರ್ಥಧಾರಿಯ ಮೂಲಕ ಮಾತಿನ ರೂಪದಲ್ಲಿ ಬರುವುದು. ಅವನವನ