ಈ ಪುಟವನ್ನು ಪ್ರಕಟಿಸಲಾಗಿದೆ

ಅರ್ಥಗಾರಿಕೆ : ನಟ-ವ್ಯಕ್ತಿ ಸಂಬಂಧ, ಪಾತ್ರ ಸೃಷ್ಟಿ



ಯಕ್ಷಗಾನ ರಂಗಭೂಮಿಯ ಒಂದು ಕವಲಾಗಿರುವ ತಾಳಮದ್ದಳೆ, ಸಾರತಃ ಒಂದು ರಂಗಪ್ರಕಾರ (Theatre)ವೇ ಆಗಿದೆ ಎಂಬ ಸ್ಪಷ್ಟ ಗ್ರಹಿಕೆ ಅದರ ಬಗೆಗಿನ ಯಾವುದೇ ವಿವೇಚನೆಗೆ ಮೂಲಭೂತವಾದ ಆವಶ್ಯಕತೆಯಾಗಿದೆ. ಅದು ರಂಗಭೂಮಿ ಎಂಬುದಕ್ಕಿಂತ ಹೆಚ್ಚಾಗಿ- ಅದೊಂದು ವಾದರಂಗ, ಕಥನ, ವಾದ ಪ್ರಧಾನವಾದ ಪ್ರಕಾರ ಎಂಬ ಒಂದು ಗ್ರಹಿಕೆ, ಜ್ಞಾತವಾಗಿಯೋ, ಅಜ್ಞಾತವಾಗಿಯೋ ಪಸರಿಸಿರುವುದೂ ತಾಳಮದ್ದಳೆಯ (ಅರ್ಥಾತ್ ಯಕ್ಷಗಾನ ಜಾಗರ ಯಾ ಪ್ರಸಂಗದ) ಮೌಖಿಕ ಮತ್ತು ಲಿಖಿತ ವಿಮರ್ಶೆಗಳಲ್ಲಿ ಧ್ವನಿತವಾಗುತ್ತಿರುವುದೂ ಕಂಡುಬರುತ್ತಿದೆ. ಇದಕ್ಕೆ ಕಾರಣಗಳು ಎರಡು: ಒಂದು ವೇಷ, ನೃತ್ಯಗಳುಳ್ಳ ಆಟವೇ ನಿಜವಾದ ರಂಗಭೂಮಿ ಎಂಬ ಗ್ರಹಿಕ, ಎರಡು ಇತ್ತೀಚಿನ ವರ್ಷಗಳಲ್ಲಿ ಕೆಲವರು ಅರ್ಥದಾರಿಗಳು (ಅಂದರೆ ಪಾತ್ರಧಾರಿ ಗಳು) ಈ ರಂಗಭೂಮಿಯಲ್ಲಿ ಪಾತ್ರನಿರ್ವಹಣೆ ಮಾಡುತ್ತ ಬಂದಿರುವ ರೀತಿ, ಅದೇನೇ ಇದ್ದರೂ, ಈ ಕಲಾಪ್ರಕಾರದಲ್ಲಿ ಕಥೆಯಿದೆ, ಅದರ ನಾಟಕೀಯ ನಿರ್ವಹಣೆಯಿದೆ, ಪಾತ್ರಗಳಿವೆ, ಅವುಗಳ 'ಅವಸ್ಥಾನುಕರಣ' ವಿದೆ. ಹಾಗಾಗಿ ಇದು ರಂಗಭೂಮಿಯೇ, ನಾಟ್ಯವೇ? ವೇಷ ನರ್ತನಾದಿ ಗಳಿಲ್ಲದಿರುವುದರಿಂದಲೂ, ಆಂಗಿಕಾಭಿನಯವು ಮಿತವಾದುದರಿಂದಲೂ, ಇದು ಶ್ರೀ ಸೇಡಿಯಾಪು ಕೃಷ್ಣ ಭಟ್ಟರು ಹೇಳಿರುವಂತೆ 'ಲುಪ್ತನಾಟ್ಯ' ಅಷ್ಟೆ, ವಾಚಿಕಾಭಿನಯ ಪ್ರಧಾನವಾದುದು. ಈ ಮೂಲಭೂತ ಗ್ರಹಿಕ ಯನ್ನಾಧರಿಸಿ, ತಾಳಮದ್ದಳೆಯ ಅರ್ಥದಾರಿಯ ವ್ಯಕ್ತಿತ್ವ, ಪಾತ್ರಧಾರಿ ಗಳೊಳಗಿನ ವೈಯಕ್ತಿಕ ಸಂಬಂಧ ಇವುಗಳನ್ನು ಈ ಪ್ರಬಂಧದಲ್ಲಿ ಚರ್ಚಿಸಲು ಯತ್ನಿಸಿದೆ.

ತಾಳಮದ್ದಳೆಯ ಅರ್ಥದಾರಿಯು 'ನಟ' ಹೌದೆ? ಎಂಬುದು. ಮೊದಲ ಪ್ರಶ್ನೆ: ಪಾಶ್ಚಾತ್ಯ ಸೃಷ್ಟಿಯ 'actor' ಎಂಬುದರಲ್ಲಿ ಅವನ ಪರಿಗಣನೆ ಆಗದಿರಬಹುದು. ಆದರೆ ನಾಟ್ಯಶಾಸ್ತ್ರದ ನಟ ಅಥವಾ