ಈ ಪುಟವನ್ನು ಪ್ರಕಟಿಸಲಾಗಿದೆ

೫೮ / ವಾಗರ್ಥ

ಇಷ್ಟನ್ನಲ್ಲದೆ ವಾಚಿಕವನ್ನೂ ನಿರ್ಮಿಸುವುದರಿಂದ, ಇಲ್ಲಿ ನಟನೆಂಬವನ ಪುನಃಸೃಷ್ಟಿ ಕಾರವು ಹೆಚ್ಚು ವ್ಯಾಪಕವಾದುದು.

ಅರ್ಥಗಾರಿಕೆಯಲ್ಲಿ - ಆಟವಾಗಲಿ, ಕೂಟವಾಗಲಿ ಸಂಪ್ರದಾಯದ ಪದ್ಧತಿ ಎಂದರೆ, ಪದ್ಯದ ಅನುವಾದವನ್ನು ಪಾತ್ರರೂಪದಲ್ಲಿ ಹೇಳು ವಂತಹದು. ಇದು ಪ್ರಸಂಗದಲ್ಲಿರುವ ಪದ್ಯಭಾಗವನ್ನು ಪ್ರಕಟಿಸುವ, ಪ್ರಕಾಶಕನ ಕೆಲಸದಂತೆ. ಈ ಕ್ರಮದಲ್ಲಿ ಅರ್ಥದಾರಿಯ ವ್ಯಕ್ತಿತ್ವವಾಗಲಿ, ಸಂಸ್ಕಾರವಾಗಲಿ ಹೆಚ್ಚಾಗಿ ಪಾತ್ರದಲ್ಲಿ ಪ್ರವೇಶಿಸುವುದಿಲ್ಲ. ಅರ್ಥ ಗಾರಿಕೆಯ ಯಶಸ್ಸು ಏನಿದ್ದರೂ, ಅರ್ಥದಾರಿಯ ಸ್ವರ, ಸ್ವರಭಾರಗಳ ಬಳಕೆ, ಭಾವದ ಅಭಿವ್ಯಕ್ತಿ ಮತ್ತು ಭಾಷಾ ಶುದ್ದಿ ಇಷ್ಟಕ್ಕೇ ಸೀಮಿತ. ವಿಚಾರದ ವೈವಿಧ್ಯಕ್ಕೆ ಸಂಬಂಧಿಸಿದುದಲ್ಲ. ಪದ್ಯದಲ್ಲಿ ನೇರವಾಗಿ ಇರುವ ಭಾವಕ್ಕೆ ಸಂಬಂಧಿಸಿ- ಸಮರ್ಥನೆಗಾಗಿ ಒಂದು ಶ್ಲೋಕವೊ, ಒಂದು ಗಾದೆ ಮಾತೊ ಬಳಕೆಯಾಗಬಹುದು. ಅರ್ಥದಾರಿಯ ಯೋಗ್ಯತೆಯೆಂಬುದು (ಹಳೆಯ ಬಳಕೆಯ ಮಾತಿನಲ್ಲಿ 'ಅನುಭವ') ಅವನ ಪೌರಾಣಿಕ ಘಟನೆ, ವಿವರಗಳ ಜ್ಞಾನಕ್ಕೆ ಸಂಬಂಧಿಸಿದ್ದು. ಖಂಡನೆ, ಮಂಡನೆಗಳು ಕೂಡ ಮುಖ್ಯವಾಗಿ ಈ ಪೌರಾಣಿಕ 'ಅನುಭವ' ವನ್ನೆ ಆಧರಿಸಿರುತ್ತಿದ್ದುವು. ಈ ಪದ್ಧತಿಯು ಮುಖ್ಯವಾಗಿ 'ತಲ್ಲೀನತೆ' ಮತ್ತು ರಸಾವಿಷ್ಕಾರಗಳ ಮಾರ್ಗದಲ್ಲಿ ಪ್ರವೃತ್ತವಾದದ್ದು. ಹಾಗಿದ್ದರೂ- ವ್ಯಕ್ತಿಗತ ವ್ಯತ್ಯಾಸಗಳಿಗೂ ಪಾತ್ರದ ಅಭಿವ್ಯಕ್ತಿಯಲ್ಲಿ ಅರ್ಥದಾರಿಯ ವ್ಯಕ್ತಿತ್ವದ ಪ್ರಭಾವಕ್ಕೂ ಅಲ್ಲೂ ಅವಕಾಶವಿದ್ದೇ ಇದೆ ಎಂಬುದನ್ನು ಮರೆಯುವಂತಿಲ್ಲ. ಹಳೆಯ ಕ್ರಮದ ಅರ್ಥಗಾರಿಕೆಯಲ್ಲಿ ಬಹುಶಃ ವೈಯಕ್ತಿಕವಾದ ಅಭಿವ್ಯಕ್ತಿಗೆ, ವಿಚಾರಕ್ಕೆ ಹೆಚ್ಚು ಅವಕಾಶ ಇದ್ದದ್ದು ಹಾಸ್ಯಗಾರನ ಪಾತ್ರಗಳಿಗೆ ಎಂದು ತೋರುತ್ತದೆ. ಇದಕ್ಕೆ ಕಾರಣ- ಹಾಸ್ಯಗಾರನಿಗೆ ಶೈಲಿಯ ಬಂಧನವಾಗಲಿ, ಪ್ರಸಂಗವು ವಿಧಿಸುವ ಕಾಲದ ಬಂಧನವಾಗಲಿ, ವಿಷಯದ ಕಟ್ಟುನಿಟ್ಟಾಗಲಿ- ಒಟ್ಟಿನಲ್ಲಿ ಔಚಿತ್ಯದ ನಿಯಮ ಸಡಿಲಾದದ್ದು ಎಂಬ ಅಂಗೀಕೃತ ಅಭಿಪ್ರಾಯ. ಹೀಗಾಗಿ, ಪಾತ್ರಧಾರಿಯು ಸಾಧಿಸಬೇಕೆಂದು ನಾವು ಹೇಳುವ 'ದೂರೀಕರಣ'ವನ್ನು ಹಾಸ್ಯಗಾರನು ಮೊದಲಿನಿಂದಲೇ ಸಾಧಿಸುತ್ತಲೇ ಬಂದಿದ್ದಾನೆ. ಆದರೆ,