ಈ ಪುಟವನ್ನು ಪ್ರಕಟಿಸಲಾಗಿದೆ
ಅರ್ಥಗಾರಿಕೆ : ನಟ-ವ್ಯಕ್ತಿ ಸಂಬಂಧ, ಪಾತ್ರ ಸೃಷ್ಟಿ / ೬೭

ಕಟ್ಟುನಿಟ್ಟಿನ ಔಚಿತ್ಯವನ್ನು ನೋಡಿದರೆ, ತಾಳಮದ್ದಳೆಯ ಸ್ಥಿತಿ ತೀರ ಸಮರ್ಪಕವಾಗಿಲ್ಲ. ಈ ಮಾನದಿಂದ ಸ್ತ್ರೀಪಾತ್ರಕ್ಕೆ ಹೊಂದುವ ಅರ್ಥಗಾರಿಕೆ- ಕೊಳ್ಳೂರು ರಾಮಚಂದ್ರ ರಾವ್, ಎಂ. ಕೆ. ರಮೇಶ ಇವರಿಬ್ಬರದೇ ಎನ್ನಬಹುದು. ಆದರ ವಿಷಯ ಪ್ರತಿಪಾದನೆ, ಅರ್ಥಗಾರಿಕೆಯ ಇತರ ಅಂಗಗಳು (ವಿದ್ವತ್ತು ಮೊದಲಾಗಿ) ಇವುಗಳನ್ನು ಪ್ರಧಾನ ಪಾತ್ರಗಳ ಮಟ್ಟಿಗೆ ಗಣಿಸಬೇಕಾಗುತ್ತದೆ. ತಕ್ಕಮಟ್ಟಿನ ಸ್ವರದ ಹೊಂದಿಕೆಯನ್ನೂ ಗಮನಿಸಿ ಪಾತ್ರ ನೀಡುತ್ತಾರೆ. (ಗೋಪಾಲಕೃಷ್ಣ ಶಾಸ್ತ್ರಿ, ಮಂಜುನಾಥ ಭಂಡಾರಿ, ಗೋವಿಂದ ಭಟ್ಟ). ಇವೆರಡೂ ಅಂಗಗಳಲ್ಲಿ ಉತ್ಕೃಷ್ಟತೆ ಸಾಧಿಸಿದ ಅಪೂರ್ವ ಉದಾಹರಣೆಯೂ ಇದೆ. (ಪ್ರೊ| ಎಂ. ಆರ್. ಶಾಸ್ತ್ರಿ). ಆದರೆ, ಯಕ್ಷಗಾನದ ಪ್ರೇಕ್ಷಕರು ಅಷ್ಟಾಗಿ ಹೆಣ್ಣುಸ್ವರವಿಲ್ಲದ ಸ್ತ್ರೀಪಾತ್ರಗಳ ಬಗೆಗೆ, ವಯಸ್ಸಾದವರು ಸ್ತ್ರೀಪಾತ್ರ ವಹಿಸುವುದರ ಬಗೆಗೆ ಒಗ್ಗಿ ಹೊಂದಿಕೊಂಡಿದ್ದಾರೆ. ಆದರೆ, ಯಕ್ಷಗಾನದ ಮುಖ್ಯ ಕ್ಷೇತ್ರದ ಹೊರಗೆ ಪ್ರದರ್ಶನ ಏರ್ಪಡಿಸಿದಾಗ ಪ್ರೇಕ್ಷಕನಿಗೂ, ಕಲಾವಿದನಿಗೂ ಸಮಸ್ಯೆಯಾಗುವುದುಂಟು. ತರುಣ ಪಾತ್ರ (ಪುಂಡು ವೇಷ)ಗಳಿಗೆ ಸಂಬಂಧಿಸಿಯೂ ಮಾತಿನ ರೀತಿ, ವೇಗ ಮುಖ್ಯವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಪಾತ್ರಧಾರಿಯ 'ಸ್ವಭಾವಕ್ಕೆ ಹೊಂದುವ ಪಾತ್ರ' ಎಂಬ ಪರಿಕಲ್ಪನೆ ಕೆಲಸಮಾಡುತ್ತದೆ. ಇದು ನಿಜದಲ್ಲಿ 'ಪಾತ್ರಧಾರಿಯ ಸ್ವಭಾವ' ಅಲ್ಲ. ಪಾತ್ರಧಾರಿಯ 'ಅಭಿವ್ಯಕ್ತಿ ಸ್ವಭಾವ' ಅಥವಾ 'ಅರ್ಥಕ್ರಮ' ಎಂದೆನಿಸಿಕೊಂಡರೆ ಸರಿಯಾಗುತ್ತದೆ.

೧೨

ವಾದ-ಸಂವಾದಗಳಲ್ಲಿ ಓರ್ವ ಪಾತ್ರಧಾರಿಯ ಸ್ವಭಾವಕ್ಕೂ, ಸಂವಾದದ ಬೆಳವಣಿಗೆಗೂ ನೇರ ಸಂಬಂಧ ಬರುತ್ತದೆ. ಓರ್ವ ಕಲಾವಿದ ಇದಿರಾಳಿಯ ಮಾತಿಗೆ ಅಲ್ಲಲ್ಲೆ ಪ್ರತಿಕ್ರಿಯೆ ಸೂಚಿಸುತ್ತಾನೊ, ಖಂಡನೆ ಮಂಡನೆಗಳನ್ನು ಒಟ್ಟಾಗಿ ಮಾಡುತ್ತಾನೊ, ಮುಖ್ಯ ಪ್ರಶ್ನೆಗಳನ್ನು ಖಂಡಿಸುತ್ತಾನೊ? ಉದಾಹರಣೆಗೆ ದೃಷ್ಟಾಂತಗಳ ಕುರಿತು ಅವನ ಪ್ರತಿಕ್ರಿಯೆಯ ಧೋರಣೆ ಏನು? ಎಂಬುದೆಲ್ಲವೂ ಪಾತ್ರಧಾರಿ ಮತ್ತು ಪಾತ್ರಗಳನ್ನು ನೇರವಾಗಿ ಒಂದಾಗಿಸುವ ಅಂಶಗಳು, ಹಿಂದಕ್ಕಾದರೆ, ಸಂವಾದ ಕ್ರಮ ಈಗಿನಂತಿರಲಿಲ್ಲ; ಪದ್ಯದಿಂದ ಪದ್ಯಕ್ಕೆ ಸಂವಾದವಿತ್ತು.