ಈ ಪುಟವನ್ನು ಪ್ರಕಟಿಸಲಾಗಿದೆ

ಜೋಷಿಯವರ ಯಕ್ಷಗಾನ ತಾಳಮದ್ದಳೆಯ ಸಪ್ತಾಹವನ್ನು ತಾನು ಆಯೋಜಿಸಿದ್ದಾಗಿ ಅಶೋಕ ಭಟ್ಟರು ನುಡಿದರು.

ಹೆಗ್ಗೋಡಿನ ನೀನಾಸಂನ ಕೆ.ವಿ ಅಕ್ಷರ ಹೆಗ್ಗೋಡಿಗೆ ಜೋಷಿಯವರು ಬಂದ ದಿನಗಳನ್ನು, ಅವರು ಜೋಷಿಯವರನ್ನು ಭೇಟಿಯಾದ ಅವಿಸ್ಮರಣೀಯ ಘಟನೆಗಳನ್ನು ಮೆಲುಕು ಹಾಕುತ್ತಾ ಜೋಷಿಯವರಿಗೆ ಸಲ್ಲಬೇಕಾದ ಗೌರವ ಸಲ್ಲದಿದ್ದರೆ ಅದು ನಮ್ಮ ಸೋಲು ಎಂದರು. ಮೈಸೂರಿನ ಪೋಲೀಸ್ ಅಕಾಡಮಿಯ ಉಪನಿರ್ದೇಶಕರಾದ ಚಿಂತನಶೀಲ ಬರೆಹಗಾರ್ತಿ ಧರಣೀದೇವಿ ಮಾಲಗಿತ್ತಿಯವರು ತಮ್ಮ ತಂದೆಯವರಾದ ಧೂಮಣ್ಣ ರೈ ಮಾಸ್ಟರರೊಂದಿಗೆ ಜೋಷಿಯವರು ಅರ್ಥ ಹೇಳುತ್ತಿದ್ದ ದಿನಗಳನ್ನು ನೆನಪಿಸಿಕೊಂಡು, ತನಗೆ ಅದರಿಂದಾಗಿ ಇಂದಿಗೂ ಯಕ್ಷಗಾನಾಸಕ್ತಿ ಉಳಿದಿರುವುದನ್ನು ತಿಳಿಯಪಡಿಸಿದರು.

ಯಕ್ಷಗಾನದ ಚಿಂತಕ, ಬರೆಹಗಾರ, ನಿವೃತ್ತ ಪತ್ರಿಕಾ ಸಂಪಾದಕ ಡಾ. ರಾಘವ ನಂಬಿಯಾರ್ ಅಧ್ಯಕ್ಷರ ನೆಲೆಯಿಂದ ಮಾತನಾಡಿದರು. ತಾನೂ, ಜೋಷಿಯವರೂ ಕಾರ್ಕಳದಲ್ಲಿ ಬೆಳೆದವರು. ಸಮಾನ ಪ್ರಾಯದವರು. ಸಮಾನ ಆಸಕ್ತರು. ಮೇಲ್ನೋಟಕ್ಕೆ ಕೆಲವೊಮ್ಮೆ ನಮಗೆ ಅಭಿಪ್ರಾಯಭೇದವಿದ್ದಂತೆ ಕಂಡರೂ ವೈಚಾರಿಕ ಅಂತರವಿಲ್ಲ. ನಾವು ಜೊತೆ ಜೊತೆಯಾಗಿ ಯಕ್ಷಗಾನದ ಸಂಶೋಧನೆಯಲ್ಲಿ ತೊಡಗಿದವರು. ಭಾವಪೂರ್ಣ ಶ್ರುತಿಬದ್ಧ ಅರ್ಥಗಾರಿಕೆ ಅವರಿಂದ ಸಾಧ್ಯವಿಲ್ಲವೆನ್ನುವುದು ಸುಳ್ಳು, ಈ ಎರಡು ದಿನ ಇಲ್ಲಿ ನಡೆದ ತಾಳಮದ್ದಳೆ ಕೂಟದಲ್ಲಿ ಅವರ ಭೀಷ್ಮನ ಅರ್ಥಗಾರಿಕೆಯನ್ನು ಕಂಡವರಿಗೆ ಇದು ಮನದಟ್ಟಾಗಬಹುದೆಂದು ಮನದುಂಬಿ ಹೊಗಳಿದರು.

ಹೀಗೆ ಜೋಷಿಯವರ ಕುರಿತು ಇನ್ನೆಷ್ಟೋ ಮಾತುಗಳು ಸ್ವಾಗತ ಭಾಷಣದಲ್ಲಿ, ಕಾರ್ಯಕ್ರಮ ನಿರ್ವಹಣೆಯಲ್ಲಿ, ಧನ್ಯವಾದ ಸಮರ್ಪಣೆಯಲ್ಲಿ ಬಂದುಹೋದವು. ಪುನರುಕ್ತಿಗಳು ಇಂತಹ ಕಾರ್ಯಕ್ರಮದಲ್ಲಿ ಸಾಮಾನ್ಯವಾದರೂ, ಆಶ್ಚರ್ಯವೆನ್ನುವಷ್ಟು ಅವುಗಳು ಕಡಿಮೆಯಿದ್ದವು. ಬಹುಶಃ ಜೋಷಿಯವರ ವಿಶಾಲವಾದ ಕಾರ್ಯ ಕ್ಷೇತ್ರ ಮತ್ತು ವ್ಯಕ್ತಿತ್ವದಿಂದಾಗಿ ಎಷ್ಟು ಮೊಗೆದರೂ ಅಲ್ಲಿ ಹೇರಳ ವಿಷಯಗಳು ಸಿಗುತ್ತವೆ. ಸ್ಥಳದ ಪರಿಮಿತಿಯಿಂದಾಗಿ ಕೆಲವರ ಮಾತುಗಳನ್ನು ದಾಖಲಿಸಲಾಗಲಿಲ್ಲ. ಕೆಲವರ ಮಾತುಗಳನ್ನು ಮೊಟಕುಗೊಳಿಸಿದ್ದೇನೆ. ಅಂತೂ ಕೊನೆಗೆ ಇಷ್ಟು ಹೇಳಬಹುದು. ಜೋಷಿಯವರು ಇತರರ ಕುರಿತು ಮಾಡಿದ ಅಭಿನಂದನೆಗಳ ಹತ್ತರಲ್ಲಿ ಒಂದೂ ಅವರಿಗೆ ಸಂದಿಲ್ಲ.

◆ ◆ ◆

ವಾಗರ್ಥ ಗೌರವ / 13