ಈ ಪುಟವನ್ನು ಪ್ರಕಟಿಸಲಾಗಿದೆ

ದಲ್ಲಿ ನಾವು ಹೆದ್ದಾರಿಯನ್ನು ಬಿಟ್ಟು ಕೆಲವು ಗಜಗಳಷ್ಟು ಹಾದು ನಾವು ತಲುಪಿದ ಜಾಗ ನನಗೆ ಸಂಪೂರ್ಣ ಅಪರಿಚಿತ. ಅಲ್ಲಿ ಯಾರನ್ನು ಅರಸಿ ಬಂದಿರಬಹುದು ಎಂಬುದು ನನಗೆ ಊಹೆಗೂ ನಿಲುಕಲಿಲ್ಲ. ನಾವು ತಲುಪಿದ ಸ್ಥಳ ಒಂದು ಪುಟ್ಟ ಆದರೆ ಮನೋಹರವಾದ ತಪೋವನದಂತಿತ್ತು. ನಡುವೆ ಒಂದು ಕಿರಿದಾದ ಸಾಂಪ್ರದಾಯಿಕ ಮನೆ, ಮನೆಯೊಳಗೆ ಸಾಧಾರಣ ಉಡುಗೆಯಲ್ಲಿ ಆಚೀಚೆ ಕಂಡೂ ಕಾಣದಂತೆ ಹಾದು ಮಾಯವಾಗುತ್ತಿದ್ದ ಹೆಂಗಳೆಯರು. ಯಾರೋ ಬಂದಿದ್ದಾರೆಂಬ ಸದ್ದು ಕೇಳಿ ಹೊರಗಡೆ ತಲೆ ಹಾಕಿ ಹಣಕಿ ನೋಡುತ್ತಿದ್ದ ವಯೋವೃದ್ಧ ಮಹನೀಯರೊಬ್ಬರು ನಮ್ಮನ್ನು ನೋಡಿ ಅಗಲವಾಗಿ ನಕ್ಕರು. ಸ್ವಲ್ಪ ಜಾಸ್ತಿ ಕೃಷವೇ ಎನ್ನಬಹುದಾದಷ್ಟು ತೆಳ್ಳಗಿನ ಶರೀರ, ಮುಖದಲ್ಲಿ ಬಹು ಸಣ್ಣ ಬಿಳಿ ಗಡ್ಡದ ದಟ್ಟಣೆಯ ನಡುವೆಯೂ ಎದ್ದು ಕಾಣುವ ಪ್ರಶಾಂತವಾಗಿ ಮಿರುಗುವ ಕಣ್ಣುಗಳು, ದಯಾಮಯ ಮುಖಮುದ್ರೆ, ವಯಸ್ಸಿನಲ್ಲಿ ಅಂತಃಸತ್ವವನ್ನು ನಿರಾಯಾಸವಾಗಿ ಹೊತ್ತುಕೊಂಡಿರುವಂತೆ ಕಂಡುಬರುವ ಋಷಿಸದೃಶ ವ್ಯಕ್ತಿತ್ವ, ನನಗೆ ಅವರ ಮೊದಲ ನೋಟದಲ್ಲಿಯೇ ಅಮೃತವರ್ಷವಾದಂತಹ ಅನುಭವ, “ಓಹೋ, ಜೋಶಿಯವರು! ಬನ್ನಿ ಬನ್ನಿ ಯಾರನ್ನೋ ಜತೆಯಲ್ಲಿ ಕರೆದು ತಂದಿದ್ದೀರಲ್ಲ!” ಎಂದು ಸ್ವಾಗತಿಸಿದರು. “ಇವರೇ ನಮ್ಮ ಮಂದಾರ ಕೇಶವ ಭಟ್ಟರು” ಎಂದು ಅವರನ್ನು ನನಗೆ ಸೂಕ್ಷ್ಮವಾಗಿ ಪರಿಚಯಿಸಿ ನಿಮ್ಮ ಹಸ್ತಪ್ರತಿಯ ಮೇಲೆ ಇವರು ಕೈ, ಕಣ್ಣುಗಳನ್ನು ಆಡಿಸಿದರೆ ಅದಕ್ಕಿಂತ ದೊಡ್ಡ ಆಶೀರ್ವಾದವಿಲ್ಲ” ಎಂದು ಸೇರಿಸಿದರು. ಅಂಗುಲಗಳ ಅಳತೆಯಲ್ಲಿ ಸ್ವಲ್ಪ ಸಣ್ಣದೇ ಎಂದು ಕಂಡುಬರುವ ಈ ಕ್ಷೇತ್ರದೊಳಗೆ ಒಳಗಿರುವವರ ಆತ್ಮೀಯತೆ, ಆದರ, ಸತ್ಕಾರಗಳ ವೈಶಾಲ್ಯ ಎಷ್ಟು ವಿಸ್ತಾರ ಎಂದೆನಿಸಿತು. ಒಂದೂ ಮಾತನ್ನಾಡದೆ ಆವರನ್ನೇ ದಿಟ್ಟಿಸುತ್ತಾ ಕೂತೆ. ಅವರಿಬ್ಬರ ನಡುವೆ ಏನು ಮಾತುಕತೆ ನಡೆಯಿತೋ ಸುಮಾರು ಮೂರು ತಾಸುಗಳಷ್ಟು ದೀರ್ಘಕಾಲ ನನ್ನ ಹಸ್ತಪ್ರತಿಯ ಪುಟಗಳನ್ನು ತಿರುವಿ ತಿರುವಿ ಅದೇನನ್ನು ಕಂಡರೋ “ನಿಮ್ಮ ಕೃತಿ ಸುಂದರವಾಗಿ ಮೂಡಿಬಂದಿದೆ. ಮಾತ್ರವಲ್ಲ. ಇಂಥದೊಂದು ಕನ್ನಡ ಸಾಹಿತ್ಯದಲ್ಲಿ ಇಷ್ಟು ತಡವಾಗಿಯಾದರೂ ಬೆಳಕಿಗೆ ಬರುತ್ತಿದೆಯಲ್ಲ” ಎಂದು ಉದ್ದರಿಸಿದವರೇ ಹತ್ತಿರವಿದ್ದ ಒಂದು ಬಿಳಿ ಕಾಗದದ ತುಣುಕನ್ನು ಹುಡುಕಿ ಅದರ ಮೇಲೆ ಮುದ್ದಾದ ಅಕ್ಷರ ಮತ್ತು ಭಾಷೆಯಲ್ಲಿ “ಇದು ಕನ್ನಡದ ಗರ್ಭದಲ್ಲೇ ಬೆಳೆದು ಸಕಾಲದಲ್ಲಿ ಹುಟ್ಟಿದ ಔರಸ ಸಂತಾನವಾಗಿದೆ” ಎಂದು ಬರೆದುಕೊಟ್ಟೇಬಿಟ್ಟರು. ನನ್ನ ಚೌಪದಿಗಳಿಗೆ ಕೆಲವು ಚಿಕ್ಕ ಪರಿಷ್ಕಾರಗಳನ್ನು ಸೂಚಿಸಿದರು. ನನಗೆ ಈರ್ವರಲ್ಲೂ ಭಕ್ತಿ ಉಕ್ಕಿಬಂತು. ಕಾಲು ಮುಟ್ಟಿ ನಮಸ್ಕರಿಸಿ ಬೀಳ್ಕೊಂಡೆವು.

ಇದು ಜೋಶಿಯವರೊಂದಿಗೆ ನಾನು ತುಸು ಹೆಚ್ಚೇ ಎನ್ನಬಹುದಾದಷ್ಟು ಸಮಯವನ್ನು ಕಳೆದ ಎರಡನೇ ಸಂದರ್ಭ. ಮತ್ತೆ ಕೆಲ ತಿಂಗಳ ನಂತರ ನನ್ನ 'ವಿಜಯನಿ'ಯ ಬಿಡುಗಡೆಯ ಸಂದರ್ಭ. ಭಾರತೀಯ ವಿದ್ಯಾಭವನದ ಆಶ್ರಯದಲ್ಲಿ ನನ್ನ ಇನ್ನೋರ್ವ ಪರಮ ಮಿತ್ರರಾದ ಡಾ.ನಾ.ದಾಮೋದರ ಶೆಟ್ಟರ ಸಂಯೋಜಕತ್ವದಲ್ಲಿ ನಡೆದ ಅಪರೂಪದ

ವಾಗರ್ಥ ಗೌರವ / 41