ಈ ಪುಟವನ್ನು ಪ್ರಕಟಿಸಲಾಗಿದೆ

ಆರ್ಥಿಕ ನೆರವು ಬರುವಂತೆ ನೋಡಿಕೊಂಡರು. ಸಹೃದಯ ದಾನಿಗಳೂ ಬೆಂಬಲಕ್ಕೆ ನಿಂತರು. ಸಮಿತಿಯ ಸದಸ್ಯರು-ಒಬ್ಬೊಬ್ಬರೂ ಒಂದೊಂದು ಕೆಲಸವನ್ನು ವಹಿಸಿಕೊಂಡು ಇಡೀ ಸನ್ಮಾನ ಸಮಾರಂಭ ಅರ್ಥಪೂರ್ಣವಾಗಿ ಜರುಗುವಂತೆ ಮಾಡಿದರು. ಅದರಲ್ಲೂ ನಮ್ಮ ಸಮಿತಿಯ ಉಪಾಧ್ಯಕ್ಷರಾದ ಖ್ಯಾತ ಉದ್ಯಮಿ, ಸಹೃದಯ, ಡಾ. ಸುಧೀರ ಶೆಟ್ಟರು ಜೋಶಿಯವರು ತನ್ನ ಮನೆಗೆ ಬಂದ ಅತಿಥಿಯೆಂದು ಭಾವಿಸಿ ಅವರ ಹಾಗೂ ಇತರ ಅತಿಥಿಗಳ ಊಟೋಪಚಾರ ಹಾಗೂ ವಸತಿ ವ್ಯವಸ್ಥೆಗಳ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ನಮ್ಮ ಭಾರವನ್ನು ಮತ್ತಷ್ಟು ಹಗುರಗೊಳಿಸಿದರು. ಇನ್ನೋರ್ವ ಉತ್ಸಾಹಿ, ನಮ್ಮ ಸಮಿತಿಯ ಖಜಾಂಜಿ ರಘುಪತಿ ತಾಮ್ಹಣ್‌‌ಕರ್ ಅವರು ಕಾರ್ಯಕ್ರಮ ಸಮೀಪಿಸುತ್ತಿದ್ದಂತೆಯೇ ಕಾರ್ಯಕ್ರಮದ ಇಡೀ ಹೊಣೆಗಾರಿಕೆಯನ್ನು ತಾವೇ ಆವಾಹಿಸಿಕೊಂಡು ಎಲ್ಲಿಯೂ ಕೊರತೆಯಾಗದಂತೆ, ಸಮರ್ಪಕವಾಗಿ ನಿರ್ವಾಹ ಮಾಡಿದರು. ಎಲ್ಲರ ಸಹಾಯ-ಸಹಕಾರ-ಬೆಂಬಲದೊಂದಿಗೆ 2017, ಮೇ 13 ಮತ್ತು 14ರಂದು ನಗರದ ಜಗನ್ಮೋಹನ ಅರಮನೆಯಲ್ಲಿ 'ಜೋಶಿ ವಾಗರ್ಥ ಗೌರವ' ಅಭಿನಂದನಾ ಸಮಾರಂಭ ನಾವಂದುಕೊಂಡಂತೆ ವ್ಯವಸ್ಥಿತವಾಗಿ ಜನಮೆಚ್ಚುವಂತೆ ಸಂಪನ್ನಗೊಂಡಿತು.

ಆ ಎರಡು ದಿನ ನಾವು ಹಮ್ಮಿಕೊಂಡಿದ್ದ 'ಡಾ. ಜೋಶಿ-ಜೀವನ ಮತ್ತು ಸಾಧನೆ' ಕುರಿತಾದ ವಿಚಾರಸಂಕಿರಣ, ಸಂವಾದ, ತಾಳಮದ್ದಳೆ, ಸಾಕ್ಷ್ಯಚಿತ್ರ ಮತ್ತು ಬಯಲಾಟ ಪ್ರದರ್ಶನಕ್ಕೆ ನಾವು ಆಮಂತ್ರಿಸಿದ ಅತಿಥಿವರೇಣ್ಯರು, ನಾಡಿನ ಖ್ಯಾತ ವಿದ್ವಾಂಸರು, ಸಾಹಿತಿಗಳು, ಚಿಂತಕರು, ಕಲಾವಿದರು, ಯಕ್ಷಗಾನ ಪ್ರೇಮಿಗಳು ಪ್ರೀತ್ಯಭಿಮಾನದಿಂದ ಭಾಗವಹಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದರು. ಈ ಅಭಿನಂದನಾ ಸಮಾರಂಭೋತ್ಸವದಲ್ಲಿ ನಾವು ಮಿಂದೆದ್ದು ಸಂತೋಷಪಡುತ್ತಿದ್ದರೂ ಒಂದು ಕೊರತೆ ನಮ್ಮನ್ನು ಬಾಧಿಸುತ್ತಲೇ ಇತ್ತು. ಜೋಶಿಯವರ ಮತ್ತು ಅವರ ಕೃತಿಗಳ ಕುರಿತಾಗಿ “ಅಭಿನಂದನಾ ಗ್ರಂಥ'ವೊಂದನ್ನು ತರಲಾಗಲಿಲ್ಲವಲ್ಲ ಎಂಬ ಕೊರತೆಯೇ ನಮನ್ನು ಬಾಧಿಸುತ್ತಿದ್ದ ಸಂಗತಿಯಾಗಿತ್ತು. ಅದನ್ನು ಜೋಶಿಯವರ ಮುಂದಿಟ್ಟಾಗ ಅವರು “ಅದನ್ನು ಕೈಗೆತ್ತಿಕೊಳ್ಳುವುದು ಬೇಡ. ಅದರ ಬಗ್ಗೆ ಕೆಲವು ಆಸಕ್ತರು, ಅಭಿಮಾನಿಗಳು ಈಗಲೇ ಮುಂದುವರಿದ್ದಾರೆ” ಎಂದು ಸೂಚಿಸಿದರು. ಆದರೂ ನಮ್ಮ ಮನಸ್ಸಿಗೆ ಸಮಾಧಾನವಿರಲಿಲ್ಲ. ಅದನ್ನು ಮತ್ತೆ ಜೋಶಿಯವರ ಅವಗಾಹನೆಗೆ ತಂದಾಗ “ಹಾಗಾದರೆ ಈ ಕಾರ್ಯಕ್ರಮದ ವಿಷಯಗಳನ್ನು ಆಧರಿಸಿ ಒಂದು ಕಿರು ಪುಸ್ತಕವನ್ನು ತನ್ನಿ” ಎಂದರು. ಅದರ ಫಲರೂಪವೇ ಇದು.

ಮುಖ್ಯವಾಗಿ ನಾವು 'ವಿಚಾರ ಸಂಕಿರಣ' ಮತ್ತು 'ಸಮಾರೋಪ ಸಮಾರಂಭ'ದಂದು ಬೇರೆ ಬೇರೆ ವಿದ್ವಾಂಸರು, ಚಿಂತಕರು ಮಾಡಿದ ಭಾಷಣಗಳನ್ನು ಅಕ್ಷರರೂಪಕ್ಕಿಳಿಸಿ ಇಲ್ಲಿ ದಾಖಲಿಸಿದ್ದೇವೆ. ಕಾರ್ಯಕ್ರಮ ನಡೆದ ಕೆಲವು ದಿನಗಳ ಮೇಲೆ ಭಾಷಣ ಮಾಡಿದವರಲ್ಲಿ “ತಮ್ಮ ಭಾಷಣವನ್ನು ಬರೆದುಕೊಡಿ” ಎಂದು ಕೇಳಿಕೊಂಡಾಗ

vi