ಈ ಪುಟವನ್ನು ಪ್ರಕಟಿಸಲಾಗಿದೆ

ಸದೃಶವಾದ ಕಾರ್ಯೋದ್ಯಮ, ಅದಕ್ಕೆ ತಕ್ಕ ಉತ್ತಮ ಫಲಪ್ರಾಪ್ತಿ-ಇದು ಸೂರ್ಯವಂಶದ ರಾಜರ ರೀತಿಯೆಂದು ಮೇಲಿನ ಶ್ಲೋಕದ ಸಾರ. ಅಂಥ ಪಾತ್ರಗಳನ್ನು ರಂಗಮಂಚದಲ್ಲಿ ನಿರೂಪಿಸುವ ಜವಾಬ್ದಾರಿ ನಮ್ಮ ತಾಳಮದ್ದಳೆಯ ಅರ್ಥಧಾರಿಗಳದು.
ಆ ಬಗೆಯ ಎತ್ತರದ ಪಾತ್ರಗಳನ್ನು ಅಭಿನಯಿಸಲು ಆ ಎತ್ತರವನ್ನು ತಮ್ಮ ಮಾತಿ ನಲ್ಲಿ ಕಾಯ್ದುಕೊಳ್ಳಬೇಕು. ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳಾಗಲೀ, ಶೇಣಿಯವ ರಾಗಲೀ, ದೇರಾಜೆ ಸೀತಾರಾಮಯ್ಯನವರಾಗಲೀ, ಸಾಮಗದ್ವಯರಾಗಲೀ, ಮುಳಿಯ ಮಹಾಬಲ ಭಟ್ಟರಾಗಲೀ, ಪ್ರಭಾಕರ ಜೋಶಿಯವರಾಗಲೀ ಈ ನಿಟ್ಟಿನಲ್ಲಿ ಸಫಲರಾಗಿದ್ದಾರೆ ಎಂಬುದೇ ಇಲ್ಲಿನ ವಾಸ್ತವ.
ಜೋಶಿಯವರು ತಮ್ಮ ಬೌದ್ಧಿಕ ಸಂಪತ್ತಿಯನ್ನು ಬಳಸಿ ತಮ್ಮ ಅಧ್ಯಯನದ ಕಾಮರ್ಸ್ ವಿಭಾಗದಿಂದಾಗಲೀ, ತಮ್ಮ ಬಲಯುತವಾದ ರಾಜಕೀಯ ಅರಿವು ಆಗ್ರಹ ವನ್ನು ಬಳಸಿಕೊಂಡಾಗಲೀ, ದಾರಿ ಬದಲಿಸಿ ಸಾಗುತ್ತಿದ್ದರೆ ರಾಷ್ಟ್ರರಾಜಕಾರಣದಲ್ಲಿ ಅವರು ಒಂದು ಗಣ್ಯಸ್ಥಾನ ಹೊಂದಬಹುದಿತ್ತು. ಆದರೆ ಹಾಗಾಗದಿದ್ದುದು ಬಹುಶಃ ಯಕ್ಷಗಾನದ ಭಾಗ್ಯವೇ.
ಜೋಶಿಯವರ ವ್ಯಕ್ತಿತ್ವದ ನಾನಾ ಮುಖಗಳನ್ನು, ಸಮಾಜಕ್ಕೆ ಉಪಕಾರಿಯಾಗಿ ನಡೆದ ಬಗೆಯನ್ನು ಸಾಧಿಸಿದ ಬಹುಜನಪ್ರಿಯತೆಯನ್ನು ರಸಕರವಾಗಿ ಬಿಂಬಿಸಿದ ಅಭಿನಂದನಕಾರ ಉಜಿರೆ ಅಶೋಕ ಭಟ್ಟರಿಗೆ ಸಮಯ ಇರುತ್ತಿದ್ದರೆ ಇನ್ನಷ್ಟು ಹೇಳುವ ಅನುಭವ ಭಂಡಾರ ಅವರಲ್ಲಿತ್ತು.
ವೇದಿಕೆಯಲ್ಲಿಂದು ಮಾತನಾಡಿದ ಒಬ್ಬೊಬ್ಬರೂ ಸಮರ್ಪಿಸಿದ ಅಭಿನಂದನ ಪುಷ್ಪಗಳ ಸೌರಭವನ್ನು, ಅರ್ಥವತ್ತತೆಯನ್ನು ಪ್ರತ್ಯೇಕವಾಗಿ ಮೆಚ್ಚಿ ಹೇಳಲು ಇಲ್ಲಿ ಸಮಯವಿಲ್ಲ. ಇವರೆಲ್ಲರ ಮಾತುಗಳೂ ನನ್ನ ಮಾತುಗಳೇ ಎಂಬ ತಾದಾತ್ಯವನ್ನು ದಾಖಲಿಸುತ್ತೇನೆ.
ಒಂದು ಅಭಿನಂದನ ಸಮಾರಂಭವನ್ನು ಹೇಗೆ ಅರ್ಥಯುತವಾಗಿಯೂ, ಮನೋರಂಜಕವಾಗಿಯೂ, ಬೌದ್ಧಿಕವಾಗಿಯೂ ನಿಡುಗಾಲ ಮೆಲುಕಾಡುವ ಹಾಗೆಯೂ ನಡೆಸಬಹುದು ಎಂಬುದನ್ನು 'ಜೋಶಿ ವಾಗರ್ಥ ಗೌರವ ಸಮಾರಂಭದ ಆಯೋಜನೆ ಮೂಲಕ ವಿದ್ವಾನ್ ಗ.ನಾ. ಭಟ್ಟರು ತೋರಿಸಿಕೊಟ್ಟಿದ್ದಾರೆ. ಅವರನ್ನು ಅವರ ಬೆಂಬಲಿಗರನ್ನು ಹಾರ್ದಿಕವಾಗಿ ಅಭಿನಂದಿಸುತ್ತೆನೆ.
ಡಾ. ಪ್ರಭಾಕರ ಜೋಶಿ-ಪ್ರಾ॥ ಸುಚೇತಾ ಜೋಶಿ ದಂಪತಿಗೆ ಇನ್ನಷ್ಟು ಹೆಚ್ಚಿನದಾದ ಯಶಸ್ಸು, ಭಾಗ್ಯಗಳು ಸುದೀರ್ಘಕಾಲ ಪ್ರಾಪ್ತವಾಗಲೆಂಬ ಶುಭ ಹಾರೈಕೆಯೊಂದಿಗೆ ಸಮಸ್ತರ ಪರವಾಗಿ ಅಭಿನಂದಿಸುತ್ತಾ ಆಲಿಸಿದ ಒಬ್ಬೊಬ್ಬರಿಗೂ ತಲೆವಾಗುತ್ತಾ ವಿರಮಿಸುವೆ
-ನಮಸ್ತೇ.

◆ ◆ ◆

ವಾಗರ್ಥ ಗೌರವ / 50