ಈ ಪುಟವನ್ನು ಪರಿಶೀಲಿಸಲಾಗಿದೆ

ಶಾಪಾದಪಿ ವರಾದಪಿ!

೮೭

ಕೈಕೇಯಿಯ ಆಚರಣೆಯನ್ನು ವೀಕ್ಷಿಸಿದರೆ ಅವಳನ್ನು ಪತಿವ್ರತೆಯೆಂದು ಗ್ರಹಿಸುವಂತಿಲ್ಲ. ಪಾರ್ವತಿಯು ದೇವತೆಗಳೀಗೆ, ಪೃಥ್ವಿಗೆ ಹಾಗೂ ಕುಬೇರನಿಗೆ ಶಾಪಗಳನ್ನು ಕೊಟ್ಟಿದ್ದಾಳೆ. ರಾಕ್ಷಸಿ ಮತ್ತು ಇಲರಾಜನಿಗೆ ಅರ್ಧ ವರ- ಕೊಟ್ಟಿದ್ದಾಳೆ. ಉಮೆಯು ನಿಷ್ಠಾವಂತ ಪತಿವ್ರತೆ, ಕಠೋರ ತಪಶ್ಚರ್ಯೆಯನ್ನು ಕೈಕೊಂಡವಳು. ಹುಟ್ಟಿನಿಂದಲೂ ಅವಳು ದೇವತೆಯಾಗಿದ್ದಳು. ಅವಳು ಕೊಟ್ಟ ಶಾಪ-ವರಗಳು ಪಾತಿವ್ರತ್ಯದ ಫಲದಿಂದ ಎಂದು ಖಂಡಿತ ಹೇಳಲಾಗುವುದಿಲ್ಲ. ಪಾತಿವ್ರತ್ಯದ ಬಲದಿಂದ ಅವಳು ಶಾಪ-ವರಗಳನ್ನು ಕೊಟ್ಟಳೆಂಬ ಉಲ್ಲೇಖವು ವಾಲ್ಮೀಕಿ ರಾಮಾಯಣದಲ್ಲಿ ಇಲ್ಲ. ಹೇಮಾ ಎಂಬುವಳು ತನ್ನ ಸಖಿಯಾದ ಸ್ವಯಂಪ್ರಭೆಗೆ ಒಂದು ವರವನ್ನು ಕೊಟ್ಟ ದಾಖಲೆ ಇದೆ.೬೧ ಅವಳು ತಪಸ್ಸನ್ನು ಮಾಡಿದ್ದಳೋ ಇಲ್ಲವೋ ಎಂಬುದು ಸ್ಪಷ್ಟವಿಲ್ಲ. ಅವಳು ಉಚ್ಚಯೋನಿಯಲ್ಲಿ ಜನಿಸಿದ ಅಪ್ಸರೆಯಾದ್ದರಿಂದ ಈ ಅರ್ಹತೆಯು ಅವಳಿಗೆ ದೊರೆತಿರಬೇಕು.
ಅನಸೂಯೆಯು ಓರ್ವ ಶ್ರೇಷ್ಠ ಪತಿವ್ರತೆ. ಸೀತೆಯ ಭೇಟಿಯಾದಾಗ ಅವಳಿಗೆ ಪಾತಿವ್ರತ್ಯದ ಮಹಿಮೆಯನ್ನು ಈ ರೀತಿ ವಿವರಿಸಿದ್ದಾಳೆ: “ಅನುಕೂಲವೇ ಇರಲಿ, ಪ್ರತಿಕೂಲವೇ ಇರಲಿ. ಯಾವ ಸ್ತ್ರೀಯರಿಗೆ ಪತಿಯು ಪ್ರಿಯವಾಗಿರುವನೋ ಆ ಸ್ತ್ರೀಯರು ಫಲದಾಯಕ ಲೋಕಗಳನ್ನು ಹೊಂದುತ್ತಾರೆ. ಪತಿಯು ದುಃಶೀಲನಾಗಿರಲಿ, ಸ್ವೇಚ್ಛಾಚಾರಿಯಾಗಿರಲಿ, ನಿರ್ಧನನಾಗಿರಲಿ, ಸುಸ್ವಭಾವದ ನಾರಿಯರಿಗೆ ಪತಿಯೇ ಪರಮದೈವತ.... ಪತಿಗಿಂತ ಮಿಗಿಲಾದ ಇಷ್ಟಬಾಂಧವರು ನನಗಿಲ್ಲ. ಅಕ್ಷಯತಪಾಚರಣೆಯು ಇಹ-ಪರಲೋಕಗಳಲ್ಲಿ ಇಷ್ಟಾರ್ಥವನ್ನು ಕೊಡುತ್ತದೆ. ಅದೇ ರೀತಿ ಸೇವೆಯನ್ನು ಸಲ್ಲಿಸಲು ಪತಿಯೇ ಯೋಗ್ಯ.... ಪ್ರಪಂಚದಲ್ಲಿಯ ಒಳಿತು-ಕೆಡಕುಗಳನ್ನು ಪರಾಮರ್ಶಿಸುವ ಗುಣ ಸಂಪನ್ನೆಯರು ಪುಣ್ಯವಂತರಂತೆ ಸ್ವರ್ಗದಲ್ಲಿ ಸಂಚರಿಸುತ್ತಾರೆ.” ಇದಲ್ಲದೆ ಅನಸೂಯೆಯು ಸೀತೆಗೆ ನುಡಿದದ್ದು:

          ನಿಯಮೈರ್ವಿವಿಧೈರಾಪ್ತಂ ತಪೋ ಹಿ ಮಹದಸ್ತಿ ಮೇ |
          ತತ್ಸಂಶ್ರಿತ್ಯಬಲಂ ಸೀತೇ ಛಂದಯೇ ತ್ವಾಂ ಶುಚಿವ್ರತೇ ||

“ವಿವಿಧ ನಿಯಮಫಲ ಪಾಲನೆಯಿಂದ ನಾನು ಮಹಾತಪಸ್ಸನ್ನು ಸಾಧಿಸಿದ್ದೇನೆ. ಆ ತಪೋಬಲವನ್ನಾಧರಿಸಿ ನೀನು ನನ್ನ ಬಳಿ ವರವನ್ನು ಕೇಳಬೇಕೆಂಬ ಇಚ್ಛೆ ನನಗೆ ಇದೆ.೬೨

——————

೬೧. ಕಿಷ್ಕಿಂಧಾಕಾಂಡ.
೬೨. ಅಯೋಧ್ಯಾಕಾಂಡ, ೧೧೮.