ಈ ಪುಟವನ್ನು ಪರಿಶೀಲಿಸಲಾಗಿದೆ

೮೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಅನಸೂಯೆಯು ಸೀತೆಗೆ ಕೊಡಬಯಸಿದ ವರವು ತಪಸ್ಸಿದ್ಧಿಯ ಫಲವಾಗಿತ್ತು; ಅದು ಪಾತಿವ್ರತ್ಯದ ಫಲವಾಗಿರಲಿಲ್ಲ; ಹೀಗಿರದಿದ್ದರೆ ತಪಸ್ಸಿನ ಸ್ವತಂತ್ರ ಉಲ್ಲೇಖದ ಆವಶ್ಯಕತೆ ಇರಲಿಲ್ಲ. ಸೀತೆಯು ಈ ವರವನ್ನು ಬೇಡಿ ಕೊಳ್ಳಲಿಲ್ಲ. ಈ ಮೇಲಿನ ಉದಾಹರಣೆಗಳಿಂದ ಕೇವಲ ಪಾತಿವ್ರತ್ಯದ ಬಲದಿಂದ ಯಾವ ಪತಿವ್ರತೆಯೂ ಶಾಪ-ವರಗಳನ್ನು ಕೊಡುವ ಅರ್ಹತೆಯನ್ನು ಪಡೆದಿಲ್ಲ. ಕೆಲವು ಶಾಪ-ವರಗಳನ್ನು ಕೊಟ್ಟ ಸ್ತ್ರೀಯರು, ಜನ್ಮದಿಂದಲೇ ಶ್ರೇಷ್ಠರಾಗಿರುವರು ಅಥವಾ ಪಾತಿವ್ರತ್ಯದ ಜೊತೆಗೆ ಇನ್ನೂ ಬೇರೆ ತಪಸ್ಸಿನ ಶಕ್ತಿಯನ್ನು ಹೊಂದಿದವರೂ ಆಗಿದ್ದಾರೆ.

ಬೇರೆ ಪತಿವ್ರತೆಯರು

ಪಂಚಪತಿವ್ರತೆಯರಲ್ಲಿ ಅಹಲ್ಯೆ, ಮಂಡೋದರಿ ಮತ್ತು ಸೀತೆ ಈ ಮೂವರು ರಾಮಾಯಣದಲ್ಲಿದ್ದಾರೆ. ಅವರ ಪಾತಿವ್ರತ್ಯದ ಸಾಮರ್ಥ್ಯವನ್ನು ಆಲೋಚಿಸುವಾಗ ಅಹಲ್ಯೆಯ ವಿಚಾರವನ್ನು ಬದಿಗಿಡಬೇಕಾಗುತ್ತದೆ. ಅಹಲ್ಯೆಯ ಕಥೆಯು ವಾಲ್ಮೀಕಿ- ರಾಮಾಯಣದಲ್ಲಿ ಎರಡಾವರ್ತಿ ಬಂದಿದೆ; ಈ ಎರಡೂ ವೃತ್ತಾಂತಗಳಲ್ಲಿ ವ್ಯತ್ಯಾಸವಿದೆ. ಉತ್ತರಕಾಂಡದ ವೃತ್ತಾಂತವು ಪ್ರಕ್ಷಿಪ್ತವಾಗಿದೆ ಎಂದು ಕೆಲವರ ಮತ; ಬಾಲಕಾಂಡವು ವಾಲ್ಮೀಕಿಯಿಂದ ರಚಿಸಲ್ಪಟ್ಟಿದೆ; ಕಾರಣ ಈ ಉತ್ತರಕಾಂಡದಲ್ಲಿಯ ಕಥೆಯು ಅಧಿಕೃತವಲ್ಲವೆಂದು ಭಾವಿಸಬೇಕು. ಇದರಲ್ಲಿಯ ಕಥೆಯಂತೆ ಇಂದ್ರನು ಅಹಲ್ಯೆಯನ್ನು ಬಲಾತ್ಕರಿಸಲಿಲ್ಲ. ಗೌತಮನ ವೇಷದಲ್ಲಿ ಆಶ್ರಮಕ್ಕೆ ಬಂದವನು ಗೌತಮನಿರದೇ ಇಂದ್ರನೆಂದು ಅಹಲ್ಯೆಗೆ ಗೊತ್ತಿತ್ತು; ಅಷ್ಟೇ ಅಲ್ಲದೆ ಆತನ ಬಗ್ಗೆ ಅಹಲ್ಯೆಗೆ ಒಂದು ಬಗೆಯ ಅಭಿಮಾನ, ಉತ್ಸುಕತೆ ಇದ್ದವು. “ಸ್ವೇಚ್ಛೆಯಿಂದ ಇಂದ್ರನೊಡನೆ ಸಮಾಗಮಕ್ಕೆ ಉದ್ಯಕ್ತಳಾದಳು' ಎಂಬ ಬಗ್ಗೆ ಸಾಕಷ್ಟು ದಾಖಲೆಗಳಿವೆ. ಸಮಾಗಮದ ನಂತರ ಅವಳು ಇಂದ್ರನಿಗೆ “ಕೃತಾರ್ಥಸ್ಮಿ ಸುರಶ್ರೇಷ್ಠ” “ಸುರಶ್ರೇಷ್ಠನೇ ನಾನು ಕೃತಾರ್ಥಳಾದೆ” ಎಂದಿದ್ದಾಳೆ. ಆಗ ಇಂದ್ರನು “ಸುತ್ತೋಣಿ ಪರಿತುಷ್ಟೋsಸ್ಮಿ” “ಸುಂದರಿಯೇ ನಾನು ಸಂತುಷ್ಟನಾಗಿದ್ದೇನೆ” ಎಂದು ಒಪ್ಪಿದ್ದಾನೆ. ಅಹಲ್ಯೆ ಸಮಾಗಮಕ್ಕೆ ಸಮ್ಮತಿಸಿದ ಕಾರಣ ಅವಳ ವರ್ತನೆಯು ವ್ಯಭಿಚಾರಾತ್ಮಕವೆನಿಸತ್ತದೆ. ಅವಳ ಅಪರಾಧವು ಘೋರವಾದದ್ದು; ಕ್ಷಮೆಗೆ ಯೋಗ್ಯವೆನಿಸದು; ಹೀಗಿದ್ದರೂ ಗೌತಮನು ಶಾಪದ ಜೊತೆಗೆ ಅಯಾಚಿತ ಉಃಶಾಪವನ್ನು ಕೊಟ್ಟಿದ್ದು ಸೋಜಿಗದ ಸಂಗತಿಯಾಗಿದೆ.೬೩ ಮಂಡೋದರಿಯು ಓರ್ವ ತುಂಬಾ ದುರ್ದೈವಿಯಾದ

——————
೬೩. ಶಾಪ ಕ್ರ. ೧೨-೧೩.