ಈ ಪುಟವನ್ನು ಪರಿಶೀಲಿಸಲಾಗಿದೆ

೧೪೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಇರಲಿಲ್ಲ; ನದಿಗಳಲ್ಲಿ ನೀರು ಇರಲಿಲ್ಲ. ಕೋಣ, ಆನೆ, ಹುಲಿ ಮೊದಲಾದ ಪ್ರಾಣಿಗಳು, ಪಕ್ಷಿಗಳು ಕೂಡ ಇರಲಿಲ್ಲ. ಇಂಥ ಬರಡಾದ ವನಪ್ರದೇಶದಲ್ಲಿ 'ಕಂಡು' ಎಂಬ ತಪೋಧನನಾದ ಋಷಿಯು ವಾಸವಾಗಿದ್ದನು. ಈ ಋಷಿಯ ಹತ್ತು ವರ್ಷ ಪ್ರಾಯದ ಮಗನು ಮರಣಹೊಂದಿದ್ದನು; ಈ ಕಾರಣದಿಂದ ಋಷಿಯು ಕ್ರುದ್ಧನಾಗಿದ್ದನು. ಆತನ ಸಿಟ್ಟು ಮತ್ತು ತಪಸ್ಸಿನ ನಿಯಮಗಳು ಬಹಳೇ ಕಠೋರವಿದ್ದುದರಿಂದ ಅವನ ಕಣ್ಣೆದುರಿಗೆ ಹೋಗುವ ಧೈರ್ಯವು ಯಾರಿಗೂ ಇರಲಿಲ್ಲ.


           ತೇನ ಧರ್ಮಾತ್ಮನಾ ಶಪ್ತಂ ಕೃತ್ಸ್ನಂ ತತ್ರ ಮಹದ್ವನಮ್ ‖೧೪‖
           ಅಶರಣ್ಯಂ ದುರಾಧರ್ಷಂ ಮೃಗಪಕ್ಷಿವಿವರ್ಜಿತಮ್ ‖೧೫‖


"ಈ ಪ್ರಚಂಡ ವನವು ಮೃಗರಹಿತ, ಪಕ್ಷಿರಹಿತವಾಗುವದು; ಇದು ಯಾರಿಗೂ, ಆಶ್ರಯಸ್ಥಾನವಾಗಲಾರದು; ಈ ವನದಲ್ಲಿ ಪ್ರವೇಶಿಸುವದು ದುಸ್ತರವಾಗುವದು" ಎಂಬ ಶಾಪವನ್ನು ಆ ಮಹಾತ್ಮನಾದ ಋಷಿಯು ಈ ವನಕ್ಕೆ ಕೊಟ್ಟಿದ್ದನು.
ಇಂಥ ಭೀಕರ ಪ್ರದೇಶದಲ್ಲಿಯೂ ಪ್ರವೇಶಿಸಿ ಹನುಮಂತನು ಸೀತೆಯನ್ನು ಶೋಧಿಸಿದನು; ಆದರೆ ಸೀತೆಯು ಅಥವಾ ರಾವಣನ ಸುಳಿವು ಸಿಗಲಿಲ್ಲ.
ಈ ವನದ ಹೆಸರಿನ ಉಲ್ಲೇಖವಿಲ್ಲ.

೩೩. ಋಷಿ < ಪುಂಜಿಕಸ್ಥಲಾ

ಕಿಷ್ಕಿಂಧಾಕಾಂಡ/೬೬

ಜಾಂಬವಾನನು ಹನುಮಂತನ ಜನ್ಮದ ಕಥೆಯನ್ನು ಆತನಿಗೆ ಹೇಳುತ್ತಾನೆ:
"ಅಂಜನಾ (ಅಂಜನಿ) ಇವಳು ಕೇಸರಿ ಎಂಬ ವಾನರನ ಪತ್ನಿ. ಪೂರ್ವ ಜನ್ಮದಲ್ಲಿ ಅವಳು ಪೂಜಿಕಸ್ಥಲಾ ಎಂಬ ಹೆಸರಿನ ಖ್ಯಾತ ಅಪ್ಸರೆಯಾಗಿದ್ದಳು.


           ವಿಖ್ಯಾತಾ ತ್ರಿಷು ಲೋಕೇಷು ರೂಪೇಣಾಪ್ರತಿಮಾ ಭುವಿ |
           ಅಭಿಶಾಪಾದಭೂತ್ತಾತ ಕಪಿತ್ವೇ ಕಾಮರೂಪಿಣೀ ‖೯‖


"ಇಡೀ ಭೂಲೋಕದಲ್ಲಿ ಅವಳು ಅತ್ಯಂತ ರೂಪವತಿಯೆಂದು ತ್ರಿಲೋಕದಲ್ಲಿ ಖ್ಯಾತಿ ಹೊಂದಿದ್ದಳು. ಋಷಿಯ ಶಾಪದಿಂದ ಅವಳು ವಾನರಜನ್ಮವನ್ನು ಪಡೆದಿದ್ದಳು. ಏಕೆಂದರೆ, ಅವಳು ಆ ಋಷಿಯನ್ನು ಅವಮಾನಿಸಿದ್ದಳು."