ಈ ಪುಟವನ್ನು ಪರಿಶೀಲಿಸಲಾಗಿದೆ

೧೫೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಶೂನ್ಯವಾಗಬಹುದೆಂಬ ಭೀತಿಯನ್ನು ವ್ಯಕ್ತಪಡಿಸಿದನು. ಇಂದ್ರನ ಭಾಷಣವನ್ನು ಕೇಳಿ ಬ್ರಹ್ಮದೇವನು ರಾಕ್ಷಸರನ್ನು ಕರೆಯಿಸಿ ಕುಂಭಕರ್ಣನತ್ತ ನೋಡಿದನು. ಕುಂಭಕರ್ಣನನ್ನು ನೋಡುತ್ತಲೇ ಬ್ರಹ್ಮನ ಎದೆ ಝಲ್ಲೆಂದಿತು. ಹೀಗಾದರೂ ಆತನು ಕುಂಭಕರ್ಣಿಗೆ ಇಂತೆಂದನು-


            ಧ್ರುವಂ ಲೋಕವಿನಾಶಾಯ ಪೌಲಸ್ತ್ಯೇನಾಸಿ ನಿರ್ವಿತಃ |
            ತಸ್ಮಾತ್ತ್ವಮದ್ಯಪ್ರಭೃತಿ ಮೃತಕಲ್ಪಃ ಶಯಿಷ್ಯಸೇ ‖೨೪‖


"ವಿಶ್ರವಸನು ನಿಃಸಂದೇಹವಾಗಿ ನಿನ್ನನ್ನು ಲೋಕನಾಶಕ್ಕಾಗಿ ಹುಟ್ಟಿಸಿದ್ದಾನೆ. ನೀನು ಇಂದಿನಿಂದ ಮೃತನಾದವನಂತೆ ನಿದ್ರಾವಸ್ಥೆಯಲ್ಲಿರುವೆ."
ಕುಂಭಕರ್ಣನು ಬ್ರಹ್ಮದೇವನಿಗೆ ಸಾಷ್ಟಾಂಗ ಹಾಕಿದನು. ಬ್ರಹ್ಮದೇವನ ಈ ಶಾಪವಾಣಿಯನ್ನು ಕೇಳಿ ರಾವಣನು ಈ ರೀತಿ ನುಡಿದನು: "ನಿಮ್ಮ ಸ್ವಂತ ಮೊಮ್ಮಗನಿಗೆ ಈ ರೀತಿ ಶಾಪ ಕೊಡುವದು ಯೋಗ್ಯವಲ್ಲ. ನಿಮ್ಮ ಮಾತು ಎಂದೂ ಸುಳ್ಳಾಗುವದಿಲ್ಲ. ಕುಂಭಕರ್ಣನು ನಿದ್ದೆಯಲ್ಲಿಯೇ ಉಳಿಯುವನು; ಆದರೆ, ಆತನು ನಿದ್ರಿಸಿರುವ ಹಾಗೂ ಎಚ್ಚರಿರುವ ಕೆಲವು ಕಾಲಾವಧಿಯನ್ನು ನೀವು ನಿರ್ಧರಿಸಬೇಕು." ರಾವಣನ ಈ ಪ್ರಾರ್ಥನೆಯನ್ನು ಕೇಳಿ ಬ್ರಹ್ಮದೇವನು ಈ ರೀತಿ ಹೇಳಿದನು:


            ಶಯಿತಾ ಹ್ಯೇಷ ಷಣ್ಮಸಾನೇಕಾಹಂ ಜಾಗರಿಷ್ಯತಿ ‖೨೮‖
            ಏಕೇನಾಹ್ನಾ ತ್ವಸೌ ವೀರಶ್ವರನ್ ಭೂಮಿಂ ಬುಭುಕ್ಷಿತಃ |
            ವ್ಯಾತ್ತಾಸ್ಯೋ ಭಕ್ಷಯೇಲ್ಲೋಕಾನ್ ಸಂವೃದ್ಧ ಇವ ಪಾವಕಃ ‖೨೯‖


"ತೀರ ಕಡಿಮೆ ಎಂದರೆ ಆರು ತಿಂಗಳವರೆಗಾದರೂ ಈತನು ಸತತವಾಗಿ ನಿದ್ರಿಸಿದ ನಂತರ ಒಂದು ದಿನದ ಮಟ್ಟಿಗೆ ಎಚ್ಚರವಾಗಿರುವನು. ಈ ಒಂದು ದಿನದಲ್ಲಿ ಹಸಿದ ಈ ವೀರನು 'ಆ' ಎಂದು ಬಾಯಿ ತೆರೆದು ಭೂಮಿಯ ಮೇಲೆ ಸಂಚರಿಸಿದಾಗ ಪಸರಿಸುತ್ತಿದ್ದ ಅಗ್ನಿಜ್ವಾಲೆಯಂತೆ ಜನರನ್ನು ಭಕ್ಷಿಸುತ್ತ ಸಾಗುವನು."
ರಾವಣನ ಬಿನ್ನಹದ ಮೇರೆಗೆ ಆಡಿದ ಬ್ರಹ್ಮದೇವನ ನುಡಿಗಳು ಉಃಶಾಪದಂತಾಗಿವೆ. ಈ ಸಂದರ್ಭದಲ್ಲಿ ಶಾಪಪಡೆದ ಕುಂಭಕರ್ಣನು ಉಃಶಾಪವನ್ನು ಬೇಡಿರದೇ, ಕುಂಭಕರ್ಣನ ಪರವಾಗಿ ರಾವಣನು ಉಃಶಾಪವನ್ನು ಬೇಡಿ ಕೊಂಡಿದ್ದಾನೆ.