ಈ ಪುಟವನ್ನು ಪರಿಶೀಲಿಸಲಾಗಿದೆ

೬೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಪುತ್ರಪೌತ್ರಾದಿ ಕಿರಿಯರಿಗೆ, ಗುರುಗಳು ಅಥವಾ ಸತ್ಪುರುಷರು ಅವರವರ ಶಿಷ್ಯಂದಿರಿಗೆ, ಅವರ ಮನೋರಥಗಳು ಸಫಲಗೊಳ್ಳಬೇಕೆಂದು ನುಡಿದ ಮಾತೇ ಆಶೀರ್ವಾದ. ದೇವತೆಗಳು ಇಲ್ಲವೇ ದೇವರ ಅವತಾರಿಗಳು ತಮ್ಮ ಭಕ್ತರಿಗಾಗಿ ನುಡಿದ ವಚನಗಳು ವರದಾನವೆನಿಸುತ್ತವೆ.೪೮ ಈ ಹೇಳಿಕೆಯಲ್ಲಿಯ ಉತ್ತರಾರ್ಧವು ಅಂಶತಃ ನಿಜವಿದೆ. ವರದಾನದ ಅರ್ಹತೆಯನ್ನು ಹೊಂದಿದ ಯಾವ ಋಷಿಮುನಿಗಳ ಉಲ್ಲೇಖವು ಇದರಲ್ಲಿರದ ಕಾರಣ ಇದು ಅವ್ಯಾಪ್ತವಾಗಿದೆ. ರಾಮಾಯಣದಲ್ಲಿ ತುಂಬಾ ಮಹತ್ತ್ವದ್ದೆನಿಸುವ. ಯಾವುದರಿಂದ ಸಮಗ್ರ ರಾಮಾಯಣವು ನಡೆಯಿತೋ ಅಂಥ, ದಶರಥನಿಂದ ಕೈಂಕೇಯಿಗೆ ದೊರೆತವರವು, ಈ ವ್ಯಾಖ್ಯೆಗೆ ಒಳಪಡುವುದಿಲ್ಲ. ಈ ವರದ ಚರ್ಚೆಯನ್ನು ಸವಿಸ್ತಾರವಾಗಿ ಬೇರೆಡೆಯಲಿ ಮಾಡಲಾಗಿದೆ.

ವರವನ್ನೀಯಲು ದೈವಿಕ ಗುಣ, ಪುಣ್ಯಸಂಗ್ರಹ, ತಪಸ್ಸು ಬೇಕಿರುತ್ತವೆ; ಆದರೆ, ಆಶೀರ್ವದಿಸಲು ವಯಸ್ಸಿನಿಂದ ಹಿರಿಯರಾಗಿದ್ದರೆ ಸಾಕು; ಇತರ ಸಾಧನೆಗಳ ಅವಶ್ಯಕತೆ ಇರುವುದಿಲ್ಲ. ನಿತ್ಯವೂ ವ್ಯವಹಾರದಲ್ಲಿ ನುಡಿಯಲಾಗುವ ಆಶೀರ್ವಾದಗಳಲ್ಲಿ ಸದಿಚ್ಛೆಯು ಇದ್ದರೂ ಇವು ಕೇವಲ ಔಪಚಾರಿಕವಾಗಿರುತ್ತವೆ. ಉದ್ಧರಿಸಿದ ಆಶೀರ್ವಾದಗಳೆಲ್ಲ ಕಾಲಾಂತರದಲ್ಲಿ ಅರ್ಥಶೂನ್ಯವೆಂದಾಗುತ್ತವೆ. ಚಿಕ್ಕವರು ಸಹ ಹಿರಿಯರ ಬಗ್ಗೆ ಸದಿಚ್ಛೆಗಳನ್ನು ವ್ಯಕ್ತಪಡಿಸಬಹುದು. ಶಿಷ್ಯನು ಗುರುವಿಗೆ ಶುಭವನ್ನು ಹಾರೈಸಬಹುದು. ಮಂಗಲಪ್ರಸಂಗದಲ್ಲಿ, ಷಷ್ಠ್ಯಬ್ದಿಪೂರ್ತಿಯಂತಹ ಸಮಾರಂಭಕಾಲದಲ್ಲಿ ಚಿಕ್ಕವರು ಹಿರಿಯರಿಗೆ ಸದಿಚ್ಛೆಯನ್ನು ವ್ಯಕ್ತಗೊಳಿಸುತ್ತಾರೆ.

ವಾಲ್ಮೀಕಿರಾಮಾಯಣದಲ್ಲಿ ಬಂದ ಕೆಲವು ಆಶೀರ್ವಾದಗಳನ್ನು ಒಂದು ವಿಭಾಗದಲ್ಲಿ ಕೊಡಲಾಗಿದೆ.೪೯

ಹರಕೆಗಳು

ಹರಕೆ ಇದು ಬೇಡಿಕೊಂಡ ಅಥವಾ ಯಾಚಿತ ವರಕ್ಕೆ ನಿಕಟವಾಗಿದೆ. ತಮ್ಮ ಮನೋರಥಗಳನ್ನು ಸಾಧಿಸಲು ದೇವತೆಗಳನ್ನು ಸಾಧಿಸಲು ದೇವತೆಗಳನ್ನು ಆಹ್ವಾನಿಸುವುದು, ಯಾಚಿಸುವುದು; ಇವು ಎರಡರಲ್ಲಿಯೂ ಇರುತ್ತವೆ.

——————
೪೮. ಭಾರತೀಯ ಸಂಸ್ಕೃತಿ ಕೋಶ, ಖಂಡ ೧, ಪು.೪೯೬ (ದ್ವಿ.ಆ.)
೪೯. ಆಶೀರ್ವಾದ, ಹರಕೆ.