ಈ ಪುಟವನ್ನು ಪ್ರಕಟಿಸಲಾಗಿದೆ
ಶ್ರೀ ರಾಮಕೃಷ್ಣಪರಮಹಂಸರ

ಅರ್ಥವಾಗಲಿ ಉದ್ದೇಶವಾಗಲಿ ಏನು ಎಂಬುದೇ ಮರೆತು ಹೋಗಿದೆ. ಪ್ರಾಣಾಯಾಮವು ಮೂರು ಬೆಟ್ಟುಗಳಿ೦ದ ಮೂಗಿನ ತುದಿಯನ್ನು ಹಿಡಿಯುವುದರಲ್ಲಿ ಪರಿಣಮಿಸಿದೆ. ದೇವರ ಪೂಜೆಯು ಮನೆ ತುಂಬ ಮೂರ್ತಿಗಳನ್ನು ಇಟ್ಟುಕೊಂಡು ಅವುಗಳ ಮೇಲೆ ಕಾಟಾಚಾರಕ್ಕೆ ಹೂವು ತಂದು ಹಾಕುವುದರಲ್ಲಿ ಪರಿಣಮಿಸಿದೆ. ಇತ್ಯಾದಿ. ಹೀಗಿರಲು, ಕಾಲಕ್ರಮೇಣ ಸೇರಿದ ಕೊಳೆಯ ಮೇಲೆ ಮಳೆ ಸುರಿಯಿತು. ಆಗಲೋ ಈಗಲೋ ಬಿದ್ದುಹೋಗುವಂತಿರುವ ಮನೆಯ ಮೇಲೆ ಬಿರುಗಾಳಿ ಬೀಸಿದಂತೆ ನಮ್ಮ ಪುರಾತನ ಧರ್ಮ ಗೃಹದ ಮೇಲೆ ಇಂಗ್ಲಿಷರ ಜೊತೆಯಲ್ಲಿ ಪಾಶ್ಚಿಮಾತ್ಯ ನಾಗರಿಕತೆಯೆಂಬ ಬಿರುಗಾಳಿ ಬೀಸಿ ಅದನ್ನು ಬುಡಮುಟ್ಟ ಅಲ್ಲಾಡಿಸಿ ಬಿಟ್ಟಿತು.

ಇದಕ್ಕೆ ಕಾರಣವೇನು ? ಬೇರೆ ಬೇರೆ ಸ್ವಭಾವವೂ ಲಕ್ಷ್ಯವೂ ಉಳ್ಳ ಎರಡು ಜನರು ಸೇರಿದರೆ ಆಗುವುದು ಹೀಗೆತಾನೆ. ಹಾಲಿಗೆಹುಳಿ ಬಿದ್ದರೆ ಅದು ಒಡೆಯುವುದು ಏನಾಶ್ಚರ್ಯ ? ನಮ್ಮವರಿಗೆ ಧರ್ಮವೂ ಪರಲೋಕವೂ ಮುಖ್ಯಲಕ್ಷ್ಯ. ಪಾಶ್ಚಿಮಾತ್ಯರಿಗೆ ಐಹಿಕ ಸುಖವೇ ಮುಖ್ಯ ಲಕ್ಷ್ಯ. ಇದಕ್ಕೆ ಅವರ ಸ್ಥಿತಿಸ್ವಭಾವಗಳೂ ಭೌತಿಕ ಮುಂತಾದ ಶಾಸ್ತ್ರಗಳೂ ಸಹಕಾರಿಗಳಾದುವು. ಇದರಿಂದ ಅವರು ಸ್ಥಲಜಲಾ೦ತರಿಕ್ಷಗಳಲ್ಲಿ ನಿರಾಯಾಸವಾಗಿ ಸಂಚಾರ ಮಾಡಬಲ್ಲವರಾದರು. ಅಗ್ನಿಪರ್ವತಗಳೂ ಸೂರ್ಯ ಚಂದ್ರರೂ ಗ್ರಹನಕ್ಷತ್ರಗಳೂ ತಮ್ಮ ಗುಟ್ಟನ್ನು ಬಿಟ್ಟುಕೊಟ್ಟುವು. ಅವರು ತಮ್ಮ ವಾಸಕ್ಕಾಗಿ ಇಹಲೋಕದಲ್ಲಿಯೇ ಇಂದ್ರಭವನಗಳನ್ನು ಕಲ್ಪಿಸಿಕೊಂಡರು. ವಿಸ್ತಾರವಾದ ರಾಜ್ಯವನ್ನು ಕಟ್ಟಿದರು. ಅಪಾರವಾದ ಸಂಪತ್ತನ್ನು ಪಡೆದರು. ಆದರೆ ಈ ಸುಖಸಾಧನಗಳಿಂದಲೇ ಅತೃಪ್ತಿಯೂ ಅಶಾಂತತೆಯೂ ಹೆಚ್ಚಿದುವು. ಆತ್ಮ, ಈಶ್ವರ, ಮುಕ್ತಿ ಮುಂತಾದ ವಿಷಯಗಳು ಭ್ರಮೆಯೆನ್ನುವ ಹಾಗಾಯಿತು. ಪಾಶ್ಚಿಮಾತ್ಯನು ಬಹಿರ್ಮುಖನಾಗಿ ನಾಸ್ತಿಕನೂ ಜಡವಾದಿಯೂ ಆದನು. ಅವನಿಗೆ ಇಹಲೋಕ ಭೋಗವೇ ಭೋಗವಾಯಿತು.