ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೨೧

ಈ ಪುಟವನ್ನು ಪ್ರಕಟಿಸಲಾಗಿದೆ
ಚರಿತ್ರೆ

ಬಾಹ್ಯಜ್ಞಾನಕ್ಕೆಲ್ಲಾ ಇದೊಂದೇ ಉಪಯೋಗವಾಯಿತು. ದಾಂಭಿಕತನ, ಸ್ವಾರ್ಥ, ದುರಾಶೆ ಇವೇ ಇದರ ಫಲವಾದುವು. ನಾವು ಪಾಶ್ಚಿಮಾತ್ಯರೊಡನೆ ಬೆರೆತಂದಿನಿಂದ ಅವರ ಐಶ್ವರ್ಯವನ್ನೂ ಐಹಿಕ ಭೋಗಸಾಧನಗಳನ್ನೂ ಮೆಚ್ಚುತ್ತ ಬಂದೆವು. ಇಂದ್ರಿಯಾತೀತವಾದ ಆಧ್ಯಾತ್ಮಿಕ ವಿಚಾರವನ್ನು ಆಗಲೇ ಮರೆಯುತ್ತ ಬಂದಿದ್ದರಿಂದ ವಿಜ್ಞಾನ ಶಾಸ್ತ್ರವೇ ಶಾಸ್ತ್ರವೆಂದೂ, ಇಂದ್ರಿಯ ಸುಖವೇ ಸುಖ ವೆಂದೂ ಭ್ರಮೆಯುಂಟಾಯಿತು. ಯಾವಾಗಲೂ ಪಾಶ್ಚಿಮಾತ್ಯರನ್ನು ನೋಡಿ ಬೆರಗಾಗುತ್ತಿದದರಿಂದ ಅವರ ಭೌತಿಕ ಶಾಸ್ತ್ರವು ಆಧ್ಯಾತ್ಮಿಕ ವಿಚಾರಗಳಲ್ಲಿ ಪ್ರಮಾಣವಾಗಲಾರದೆಂಬುದನ್ನೂ, ಸಾವಿರಾರು ವರ್ಷಗಳ ಕೆಳಗೆ ಸಂಸಾರತ್ಯಾಗಮಾಡಿ ಪರಮಾತ್ಮ ಧ್ಯಾನದಲ್ಲಿ ನಿರತರಾಗಿದ್ದು ಜ್ಞಾನಸಂಪಾದನೆ ಮಾಡಿದ ಋಷಿಗಳೇ ಪ್ರಮಾಣವೆಂಬುದನ್ನೂ ನಾವು ನಂಬಲಾರದೇ ಹೋದೆವು. ವಿಜ್ಞಾನಬಲದಿಂದ ಪಂಚ ಭೂತಗಳನ್ನು ವಶಮಾಡಿಕೊಂಡು ಇಷ್ಟು ಸಾಮರ್ಥ್ಯವನ್ನೂ ಸಂಪತ್ತನ್ನೂ ಪಡೆದಿರುವ ಪಾಶ್ಚಿಮಾತ್ಯರು "ಧರ್ಮವೆಂದು ವೈದಿಕರೂ ಪುರೋಹಿತರೂ ತಮ್ಮ ಹೊಟ್ಟೆ ತುಂಬಿಕೊಳ್ಳುವುದಕ್ಕಾಗಿ ಮಾಡಿದ ಒಂದು ಕಟ್ಟು. ಪರಲೋಕ, ಪರಬ್ರಹ್ಮ, ಪರಮಾತ್ಮ ಇವೆಲ್ಲಾ ಒಂದು ದೊಡ್ಡ ಕವಿಕಲ್ಪನೆ. ಎಷ್ಟು ಐಶ್ವರ್ಯವನ್ನು ಸಂಪಾದಿಸಿದರೂ ಹುಟ್ಟಿದಂದಿನಿಂದ ಸಾಯುವವರೆಗೂ ಕೀಳುಜಾತಿಯವರು ಕೀಳುಜಾತಿ ಯಲ್ಲಿಯೇ ಇರುವುದೆಂದರೆ ಯಾವ ನ್ಯಾಯ ?" ಎಂದು ಮುಂತಾಗಿ, ಹೇಳಿದರಿಂದ ಅದೇ ವೇದವಾಕ್ಯವಾಯಿತು. ನಾವು ಅವರ ಉಪದೇಶವನ್ನು ಸ್ವೀಕರಿಸಿ ಅವರು ಹೇಳಿಕೊಟ್ಟ ಮಂತ್ರವನ್ನೇ ಜಪಿಸುತ್ತಾ, ಅವರು ತೋರಿಸಿದ ದಾರಿಯನ್ನೇ ಹಿಡಿದೆವು. ಅದಕ್ಕೆ ಫಲವಾಗಿ ಅವರಂತೆ ನಾವೂ ಸ್ವಲ್ಪ ಐಹಿಕ ಭೋಗದ ರುಚಿಯನ್ನು ನೋಡಿದೆವು. ಜೊತೆಯಲ್ಲಿಯೇ ಅವರಂತೆ ಸ್ವಾರ್ಥ ಪರತೆ ಧರ್ಮದಲ್ಲಿ ಅಪನಂಬುಗೆ, ಅತೃಪ್ತಿ, ಅಶಾಂತತೆ ಇವುಗಳನ್ನು ಯಥೇಚ್ಛವಾಗಿ ಸಂಪಾದನೆ ಮಾಡಿಕೊಂಡೆವು.