ಒಬ್ಬ ದಿವ್ಯ ಪುರುಷನು ಕಾಣಿಸಿಕೊಂಡು ವೀಣಾಧ್ವನಿಯಂತೆ ಮಧುರ ವಾದ ಸ್ವರದಿಂದ ಅವನನ್ನು ಕುರಿತು "ಖುದಿರಾಮ, ನಿನ್ನ ಭಕ್ತಿಗೆ ನಾನು ಬಹಳವಾಗಿ ಮೆಚ್ಚಿದೆ. ನಾನು ನಿನ್ನ ಮನೆಯಲ್ಲಿ ಪುತ್ರರೂಪದಿಂದ ಅವತಾರಮಾಡಿ ನಿನ್ನ ಸೇವೆಯನ್ನು ಸ್ವೀಕರಿಸುವೆನು" ಎಂದು ಹೇಳಿದನು. ಈ ಮಾತನ್ನು ಕೇಳಿ ಆನಂದವಾದರೂ ಖುದಿರಾಮನು ಉತ್ತರಕ್ಷಣದಲ್ಲಿಯೇ ಚಿರದರಿದ್ರನಾದ ತಾನು ಭಗವಂತನಿಗೆ ತಿನ್ನುವುದಕ್ಕೆ ಏನು ಕೊಡಲಿ ಹೇಗೆ ಕಾಪಾಡಲಿ ಎಂದು ಮುಂತಾಗಿ ಚಿಂತಿಸುತ್ತ "ಬೇಡ, ಬೇಡ, ಪ್ರಭೋ ! ನನಗೆ ಅಷ್ಟು ಸೌಭಾಗ್ಯ ಬೇಡ ; ನನ್ನ ಮೇಲೆ ಕೃಪೆಮಾಡಿ ದರ್ಶನ ಕೊಟ್ಟು ನನ್ನನ್ನು ಕೃತಾರ್ಥನಾಗಿ ಮಾಡಿ ಈವಿಧವಾದ ನಿನ್ನ ಅಭಿಪ್ರಾಯವನ್ನು ಪ್ರಕಾರಮಾಡಿದೆಯಲ್ಲಾ, ಇದೇ ನನಗೆ ಯಥೇಚ್ಛವಾಯಿತು. ನೀನು ನನ್ನ ಹೊಟ್ಟೆಯಲ್ಲಿ ಹುಟ್ಟಿದರೆ ದರಿದ್ರನಾದ ನಾನು ನಿನ್ನ ಸೇವೆಯನ್ನು ಹೇಗೆಮಾಡೇನು?" ಎಂದು ಹೇಳಿದನು. ಆ ದಿವ್ಯ ಪುರುಷನು ಖುದಿರಾಮನ ಈ ವಿಧವಾದ ದೈನ್ಯವನ್ನು ನೋಡಿ ಪ್ರಸನ್ನನಾಗಿ "ಭಯಪಡಬೇಡ, ಖುದಿರಾಮ, ನೀನು ಏನುಕೊಟ್ಟರೆ ಅದನ್ನೇ ಸ್ವೀಕರಿಸಿ ತೃಪ್ತಿಹೊಂದುವೆನು. ನನ್ನ ಅಭಿಲಾಷೆ ಪೂರ್ಣವಾಗುವುದಕ್ಕೆ ಅಡ್ಡಿ ಮಾಡಬೇಡ." ಎಂದನು. ಈ ಮಾತನ್ನು ಕೇಳಿ ಖುದಿರಾಮನು ಏನೂ ಹೇಳಲಾರದೆಹೋದನು. ಅದರಿಂದ ಆನಂದದುಃಖ ಮೊದಲಾದ ಪರಸ್ಪರವಿರುದ್ಧವಾದ ಭಾವಗಳು ಅವನ ಹೃದಯದಲ್ಲಿ ಏಕಕಾಲದಲ್ಲಿ ಪ್ರವಹಿಸುತ್ತಾ ಅವನನ್ನು ಸ್ತಂಭಿತನನ್ನಾಗಿ ಮಾಡಿದುವು. ಇಷ್ಟುಹೊತ್ತಿಗೆ ಎಚ್ಚರವಾಗಲು ಹಾಸಿಗೆಯಮೇಲೆ ಎದ್ದು ಕುಳಿತು ಏನೇನೋ ಯೋಚನೆ ಮಾಡುತ್ತಾ ಕೊನೆಗೆ ಯಾವನೋ ಒಬ್ಬ ಮಹಾ ಪುರುಷನು ತನ್ನ ಮನೆಯಲ್ಲಿ ಅವತಾರ ಮಾಡುವನೆಂದು ದೃಢಮಾಡಿಕೊಂಡನು. ಆದರೆ ಈ ಅದ್ಭುತ ಸ್ವಪ್ನದ ಸಾಫಲ್ಯವನ್ನು ಪರೀಕ್ಷೆ ಮಾಡುವವರೆಗೂ ಯಾರ ಎದುರಿಗೂ ಈ ಸುದ್ದಿಯನ್ನು ಎತ್ತುವುದಿಲ್ಲವೆಂದು ನಿಶ್ಚಯಮಾಡಿ ಕೊಂಡು ಊರಿಗೆ ಹಿಂತಿರುಗಿ ಹೊರಟನು.
ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೩೧
ಈ ಪುಟವನ್ನು ಪ್ರಕಟಿಸಲಾಗಿದೆ
ಚರಿತ್ರೆ
೧೫