ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೭೭

ಈ ಪುಟವನ್ನು ಪ್ರಕಟಿಸಲಾಗಿದೆ

'''ಏಳನೆಯ ಅಧ್ಯಾಯ.''' [[:ವರ್ಗ:|]]

ಈಗ ಪರಮಹಂಸರು ವಿಧ್ಯುಕ್ತವಾಗಿ ಪೂಜೆ ಪುರಸ್ಕಾರಗಳನ್ನುಮಾಡುವುದು ಅಸಾಧ್ಯವಾಗಿ ದೇವಿಯ ಅರ್ಚನೆಯ ಕೆಲಸವನ್ನು ಬಿಟ್ಟಿದ್ದರೂ ದೇವಿಯ ಪೂಜೆಗಾಗಿ ಪ್ರತಿನಿತ್ಯವೂ ಬೆಳಗ್ಗೆ ಹೊತ್ತು ಹೂ ಬಿಡಿಸಿಕೊಂಡು ಬಂದು ಮಾಲೆಗಳನ್ನು ಕಟ್ಟಿಕೊಡುತ್ತಿದ್ದರು. ಒಂದುದಿನ ಬೆಳಗ್ಗೆ ಹೀಗೆ ಮಾಲೆಗೆಂದು ಗಂಗಾತೀರದ ಹೂತೋಟದಲ್ಲಿ ಹೂಬಿಡಿಸುತ್ತಿದ್ದರು. ಆಗ ಒಂದು ದೋಣಿಯು ದಕ್ಷಿಣೇಶ್ವರದ ದೇವಸ್ಥಾನದ ಕಡೆಗೆ ಬರುವಂತೆ ಕಂಡುಬಂತು. ಕಾವಿಯ ಸೀರೆಯನ್ನುಟ್ಟು ಭೈರವೀ ವೇಷಧಾರಿಣಿಯಾದ ಒಬ್ಬ ಹೆಂಗಸುಕೈಯಲ್ಲಿ ಒಂದು ಪುಸ್ತಕಗಳ ದಪ್ತರವನ್ನು ಹಿಡಿದುಕೊಂಡು ದೋಣಿಯಿಂದ ಇಳಿದು ಬಂದಳು. ಆಕೆಯು ಬರುತ್ತಿದ್ದದ್ದನ್ನುನೋಡಿ ಪರಮಹಂಸರು ದೇವಸ್ಥಾನಕ್ಕೆ ಹೋಗಿ ಹೃದಯನನ್ನುಕೂಗಿ ತಾನು ಕರೆದೆನೆಂದು ಹೇಳಿ ಭೈರವೀ ಬ್ರಾಹ್ಮಣಿಯನ್ನುತಾನಿದ್ದಲ್ಲಿಗೆ ಕರೆದುಕೊಂಡು ಬರಲು ಹೇಳಿದನು. ಹೃದಯನುಸ್ವಲ್ಪ ಹಿಂದುಮುಂದು ನೋಡಿ " ಹೆಂಗಸು ಅಪರಿಚಿತಳು ; ಕರೆದರೆತಾನೇ ಇಲ್ಲಿಗೆ ಬರುವಳೇ ?” ಎಂದು ಕೇಳಲು, ಪರಮಹಂಸರು" ನನ್ನ ಹೆಸರನ್ನು ಹೇಳಿ ನಾನು ಕರೆಯುತ್ತೇನೆಂತ ಹೇಳು; ಬರುತ್ತಾಳೆ” ಎಂದು ಹೇಳಿದರು. ಅದರಂತೆ ಹೃದಯನು ಹೋಗಿ ಕರೆಯಲು ಭೈರವಿಯು ಹಿಂದೆ ಮುಂದೆ ನೋಡದೆ ಯಾವ ಪ್ರಶ್ನೆಯನ್ನೂ ಮಾಡದೆ ಅವರಿದ್ದೆಡೆಗೆ ಬಂದುಬಿಟ್ಟಳು.

ಪರಮಹಂಸರನ್ನು ನೋಡಿ ಅತ್ಯಂತ ಆನಂದದಿಂದ ಭೈರವಿಯ ಕಣ್ಣಿಂದ ಆನಂದಾಶ್ರುವು ಹರಿಯುವುದಕ್ಕೆ ಆರಂಭವಾಯಿತು.