ಈ ಪುಟವನ್ನು ಪ್ರಕಟಿಸಲಾಗಿದೆ

ವಿಜ್ಞಾಪನೆ.

_________

ಶ್ರೀ ಶ್ರೀರಾಮಕೃಷ್ಣ ಪರಮಹಂಸರವರು, "ಬ್ರಹ್ಮಸಾಕ್ಷಾತ್ಕಾರವಾಗದೆ ವೇದಾಂತ ವಿಚಾರವನ್ನು ಗ್ರಂಥಗಳಲ್ಲಿ ಓದಿಕೊಂಡು ಪರಮಾತ್ಮನ ಸ್ವರೂಪವನ್ನು ಕುರಿತು ವಿಚಾರಮಾಡುವುದು, ಭೂಪಠದಲ್ಲಿ ಕಾಶೀಪಟ್ಟಣವನ್ನು ನೋಡಿ ಅದನ್ನು ವರ್ಣನೆ ಮಾಡುವಹಾಗೆ” ಎಂದು ಹೇಳುತ್ತಿದ್ದರು. ನಾವು ಅವರ ಜೀವನ ಚರಿತ್ರೆಯನ್ನು ಬರೆಯುವುದಕ್ಕೆ ಹೊರಟಿರುವುದೂ ಸ್ವಲ್ಪ ಮಟ್ಟಿಗೆ ಹಾಗೆಯೇ ಆಗಿದೆ. ನಮಗೆ ಆ ಮಹಾನುಭಾವರ ಸಾನ್ನಿಧ್ಯದಲ್ಲಿಯೇ ಇದ್ದುಕೊಂಡು ಅವರ ಸಂಗತಿಗಳನ್ನು ಪ್ರತ್ಯಕ್ಷವಾಗಿ ತಿಳಿದುಕೊಳ್ಳುವ ಪುಣ್ಯವು ಲಭಿಸಲಿಲ್ಲ. ಅವರು ಹೇಳಿರುವ ವಿಚಾರಗಳನ್ನು ಪೂರ್ಣವಾಗಿ ಗ್ರಹಿಸುವ ಶಕ್ತಿಯಂತೂ ಇಲ್ಲವೇ ಇಲ್ಲ. ಆದರೂ ಬೆಂಗಳೂರಿನ ಶ್ರೀರಾಮ ಕೃಷ್ಣ ಮಠದಲ್ಲಿರುವ ಶ್ರೀನಿರ್ಮಲಾನಂದ ಸ್ವಾಮಿಗಳ ಆಜ್ಞೆಯಂತೆ ಈ ಕೆಲಸವನ್ನು ಕೈಗೊಂಡು ಪರಮಹಂಸರ ಶಿಷ್ಯಮಂಡಲಿಗೆ ಸೇರಿದ ಶಾರದಾನಂದ ಸ್ವಾಮಿಗಳಿ೦ದ ಬ೦ಗಾಳೀ ಭಾಷೆಯಲ್ಲಿ ರಚಿತವಾದ "ಶ್ರೀರಾಮಕೃಷ್ಣ ಲೀಲಾಪ್ರಸಂಗ” ಎಂಬ ಗ್ರಂಥದ ಆಧಾರದ ಮೇಲೆ ಈ ಸಣ್ಣ ಪುಸ್ತಕವನ್ನು ಬರೆದಿದ್ದೇವೆ. "ಶ್ರೀರಾಮಕೃಷ್ಣ ಲೀಲಾಪ್ರಸಂಗವು" ಬಹು ದೊಡ್ಡ ಗ್ರಂಥ; ಇದುವರಿಗೆ ಪ್ರಕಟವಾಗಿರುವ ಆ ಗ್ರಂಥವು ಸುಮಾರು ೧,೫೦೦ ಪುಟಗಳವರೆಗೆ ಬಂದಿದೆ. ಆದರೂ ಅದು ಅಷ್ಟಕ್ಕೇ ಮುಗಿಯುವಂತಿಲ್ಲ. ಇದೇ ಬೆಂಗಳೂರು ಮಠದಲ್ಲಿಯೇ ಇದ್ದು ಈಗ ಮದರಾಸಿಗೆ ದಯಮಾಡಿರುವ ವಿದೇಹಾ ನಂದ ಸ್ವಾಮಿಗಳು ಅದಷ್ಟನ್ನೂ ನಮಗೆ ಓದಿತಿಳಿಸಿದರು. ಆದ್ದರಿಂದ ಈ ಗ್ರಂಥರಚನೆಗೆ ಅವರಿಂದಾದ ಸಹಾಯವು ಇಷ್ಟೆಂದು