ಈ ಪುಟವನ್ನು ಪ್ರಕಟಿಸಲಾಗಿದೆ

10

ಮುನ್ನುಡಿ
(ಪ್ರಥಮ ಆವೃತ್ತಿ)

ಅಥಣಿಯ ಶ್ರೀ ಮ. ಶ್ರೀ ದೇಶಪಾಂಡೆಯವರ "ಶ್ರೀ ಬಸವಣ್ಣನವರ ದಿವ್ಯ ಜೀವನ" ಎಂಬ ಈ ಗ್ರಂಥಕ್ಕೆ ಮುನ್ನುಡಿಯ ರೂಪವಾಗಿ ಒಂದೆರಡು ಮಾತುಗಳನ್ನು ಬರೆಯಲು ನಾನು ಹರ್ಷಿಸುತ್ತೇನೆ. ಶ್ರೀ ದೇಶಪಾಂಡೆ ಯವರು ಶ್ರದ್ಧಾವಂತ ಹಾಗೂ ಆವೇಶಪೂರ್ಣ ಲೇಖಕರು. ಅವರು ಇಂಗ್ಲೀಷ್, ಕನ್ನಡ, ಮರಾಠಿ ಹಾಗೂ ಸಂಸ್ಕೃತ ಭಾಷೆಗಳಲ್ಲಿ ಹಲವಾರು ಗ್ರಂಥಗಳನ್ನು ರಚಿಸಿ ಹೆಸರು ಪಡೆದಿದ್ದಾರೆ.

ಪ್ರಸಕ್ತ ಗ್ರಂಥದಲ್ಲಿ ಅವರು ಕನ್ನಡನಾಡಿನ ಕಣ್ಮಣಿಯೂ, ಭಾರತೀಯ ತತ್ವಸಿದ್ಧಾಂತದ ಪುರುಷಮಣಿಯೂ, ಜಗತ್ತಿನ ಜೀವನ ಸಿದ್ಧಾಂತದ ದಿನಮಣಿಯೂ ಆಗಿರುವ ಬಸವಣ್ಣನವರ ದಿವ್ಯ ಜೀವನದ ಪರಿಚಯವನ್ನು ಭಕ್ತಿ ಪರವಶತೆಯಿಂದ ಮಾಡಿಕೊಟ್ಟಿದ್ದಾರೆ. ಈ ಗ್ರಂಥವನ್ನು ಎಂಟು ಅಧ್ಯಾಯಗಳಾಗಿ ವಿಂಗಡಿಸಿ, ನಲವತ್ತು ಶಿರೋನಾಮಗಳಲ್ಲಿ ವಿಭಜಿಸಿ ಅವರು ಬಸವಣ್ಣನವರ ಉದಾತ್ತ ನಡೆನುಡಿಗಳನ್ನು ಹೃದಯಂಗಮವಾಗಿ ಚಿತ್ರಿಸಿದ್ದಾರೆ.

ಮಾನವನು ಅಶಾಶ್ವತವಾದ ಅನೇಕತೆಯಿಂದ ಶಾಶ್ವತವಾದ ಏಕತೆಯ ಕಡೆಗೆ, ಅಳಿಯುವ ಭೌತಿಕ ಸುಖದಿಂದ ಅಳಿಯದ ಆನಂದದ ಕಡೆಗೆ, ಅಜ್ಞಾನದ ಕತ್ತಲೆಯಿಂದ ಸುಜ್ಞಾನದ ಬೆಳಕಿನ ಕಡೆಗೆ ಸಾಗಿರುವನು. ನಿಧಾನವಾದರೂ ಸ್ಥಿರವಾದ, ಸೌಮ್ಯವಾದರೂ ಪರಿಣಾಮಕರವಾದ, ಇಡೀ ಲೋಕಕ್ಕೆ ಅಖಂಡ ಕಲ್ಯಾಣವನ್ನು ಉಂಟು ಮಾಡುವ ಹಾಗೂ ಜೀವಕೋಟಿಗೆ ಅಪಾರ ಸೌಭಾಗ್ಯವನ್ನು ನೀಡುವ - ದಿವ್ಯ ಭವ್ಯ "ವಿಕಾಸ" ಮಾರ್ಗದಲ್ಲಿ ಬಸವಣ್ಣನವರು ಅಡಿಯಿಟ್ಟರು. ತಮ್ಮ ಬುದ್ಧಿಬಲದಿಂದ ಪರಮಾತ್ಮನನ್ನು ಅರಿತು, ಭಾವಬಲದಿಂದ ಆತನನ್ನು ಒಲಿಸಿ, ತಪೋಬಲದಿಂದ ಆತನ ಕರುಣೆಯನ್ನು ಪಡೆದು, ಪ್ರಜ್ಞಾಬಲದಿಂದ ಆತನ ಇರವನ್ನು ಸಾಕ್ಷಾತ್ಕರಿಸಿ, ತಾವು ಉದ್ಧಾರವಾಗುವುದಲ್ಲದೇ ಜಗತ್ತನ್ನು ಉದ್ಧರಿಸಲು ಸಾಹಸ ಮಾಡಿದ ಜಗತ್ತಿನ ಕಾರಣಪುರುಷರಲ್ಲಿ ಬಸವಣ್ಣನವರು