ಈ ಪುಟವನ್ನು ಪ್ರಕಟಿಸಲಾಗಿದೆ
11

ಒಬ್ಬರು. ಶ್ರೀ ದೇಶಪಾಂಡೆಯವರು ಈ ಗ್ರಂಥದಲ್ಲಿ ಅವರ ದಿವ್ಯಜೀವನವನ್ನು ವೈವಿಧ್ಯತೆಯಿಂದ ರೂಪಿಸಿದ್ದಾರೆ.

ಮಹಾ ಕಾರಣಿಕರಾದ ಬಸವಣ್ಣನವರು ತಮ್ಮ ಭಕ್ತಿಯ ಭಂಡಾರ ವನ್ನು ಹೇಗೆ ಗಳಿಸಿ ಬೆಳೆಸಿದರು, ಅದರ ಫಲವಾಗಿ ಅವರು ಪರಮಾತ್ಮನ ಅನುಭಾವವನ್ನು ಹೇಗೆ ಪಡೆದರು, ಅದರ ಬಲದಿಂದ ಪರಮಾನಂದವನ್ನು ಹೇಗೆ ಸವಿದರು, ತಾವು ಸವಿದ ಆ ಪರಮಾನಂದವನ್ನು ಜಗತ್ತಿಗೆ ಸಾರಿ ಅದನ್ನು ಅನುಕಂಪೆಯಿಂದ ಜನತೆಗೆ ಹೇಗೆ ಹಂಚಿಕೊಟ್ಟರು, ಎಂಬುದನ್ನು ದೇಶಪಾಂಡೆಯವರು ಈ ಗ್ರಂಥದಲ್ಲಿ ಕಣ್ಣೆದುರು ಒಂದು ಚಿತ್ರ ಕಟ್ಟುವಂತೆ ವರ್ಣಿಸಿದ್ದಾರೆ. ಬಸವಣ್ಣನವರು ಸಾಧಕರಾಗಿದ್ದಾಗ ಅವರ ಅಂತರಂಗದಲ್ಲಿ ಉದಿಸಿದ ಭಾವಲಹರಿಗಳನ್ನೂ ಅನುಭಾವಿಗಳಾದಾಗ ಅವರ ಪಡೆದ ಆನಂದ ತೃಪ್ತಿಗಳನ್ನೂ ಅವರು ತಮ್ಮ ಅಮೃತವಚನಗಳಲ್ಲಿ ಹೇಗೆ ಎರಕ ಹೊಯ್ದಿದ್ದಾರೆ ಎಂಬುದನ್ನೂ ಇಲ್ಲಿ ನೋಡಬಹುದು. ಮುಂದೆ ಬಸವಣ್ಣನವರು ಪರಮಾತ್ಮನ ಆಣತಿಯ ಮೇರೆಗೆ ಭಕ್ತವೃಂದಕ್ಕೆ ಬೋಧೆ ಮಾಡಿ ಅವರನ್ನು ಹೇಗೆ ಉದ್ದರಿಸಿದರೆಂಬುದನ್ನೂ ಅವರ ಪ್ರತ್ಯಕ್ಷ ವಚನಗಳ ಉದಾಹರಣೆಯಿಂದ ಅವರದೇ ಆದ ಆವೇಶಪೂರ್ಣ ಶೈಲಿಯಲ್ಲಿ ದೇಶಪಾಂಡೆಯವರು ವಿವರಿಸಿದ್ದಾರೆ. ಹರಿಹರ ಮಹಾಕವಿಯ 'ಬಸವರಾಜದೇವರ ರಗಳೆ'ಯ ಚಾರಿತ್ರಿಕ ಹಿನ್ನಲೆಯ ಮೇಲೆ, ಬಸವಣ್ಣನವರ ಅಂತರಂಗ ನಿರೂಪಕ ವಚನಗಳ ಮೇಳದಿಂದ ಬಸವಣ್ಣನವರನ್ನು ಕುರಿತು ಪುರಾಣ ಹಾಗೂ ಐತಿಹ್ಯಕಥನಗಳ ನೆರವಿನಿಂದ ಕವಿಸಹಜವಾದ ಭಾವಪೂರ್ಣ ಕಲ್ಪನಾಸೂತ್ರದಿಂದ ಹೆಣೆದು ಶ್ರೀ ದೇಶಪಾಂಡೆಯವರು ಈ ಕೃತಿಯನ್ನು ರೂಪಿಸಿದ್ದಾರೆ.

ಈ ಗ್ರಂಥರಚನೆಯಲ್ಲಿ ಶ್ರೀ ದೇಶಪಾಂಡೆಯವರ ಶ್ರಮ ಸಾರ್ಥಕವಾಗಿದೆಯೆಂದು ಹೇಳಲು ಸಂಶಯವಿಲ್ಲ, ಬಸವಣ್ಣನವರಂಥ ಅನುಭಾವಿಗಳ (ಮಿಸ್ಟಿಕ್) ಜೀವನಚರಿತ್ರೆಗಳನ್ನು ಚಿತ್ರಿಸುವುದು ಎಷ್ಟೊಂದು ಕಷ್ಟವೆಂಬುದನ್ನು ಅರಿತರೆ ಶ್ರೀ ದೇಶಪಾಂಡೆಯವರು ಈ ಕೆಲಸವನ್ನು ಸಾಮರ್ಥ್ಯದಿಂದ ನಿರ್ವಹಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಅವರ ಈ ಪ್ರಯತ್ನವು ಶ್ಲಾಘನೀಯವಾಗಿದೆ.

-ಬಿ.ಡಿ. ಜತ್ತಿ