ಈ ಪುಟವನ್ನು ಪ್ರಕಟಿಸಲಾಗಿದೆ
97

ಕಾಯವಿಕಾರವು ಬಸವಣ್ಣನವರನ್ನು ಈ ಬಗೆಯಾಗಿ ಕಾಡಿತು. ಅವರ ಬೆಂದ ಬಸುರ ಅವರಿಗೆ ಶಿವನನ್ನು ನೆನೆಯಗೊಡಲಿಲ್ಲ.
ಇಂದಿಗೆಂತು ನಾಳಿಗಂತು ಎಂದು
ಬೆಂದೊಡಲ ಹೊರೆಯ ಹೋಯಿತೆನ್ನ ಸಂಸಾರ !
ಹಿಂದೆ ನಾನಾ ಯೋನಿಯಲ್ಲಿ ಬಂದೆನೆಂಬ ಹೇಯವಿಲ್ಲ !
ಮುಂದೆ ಮುಕ್ತಿಯಾಗಬೇಕೆಂಬ ಯುಕ್ತಿಯಿಲ್ಲ !
ಎಂದೆಂದೂ ಸದಾಶಿವನ ಕುಂದದೆ ನೆನೆಯಲೀಯದೆ
ಕೊಂದುದಯ್ಯಾ ಈ ಮಾಯೆ ಕೂಡಲಸಂಗಮದೇವಾ!
ಉದಯಾಸ್ತಮಾನವೆನ್ನ ಬೆಂದ ಬಸುರಂಗೆ ಕುದಿಯಲಲ್ಲದೆ,
ನಿಮ್ಮ ನೆನೆಯಲು ತೆರಹಿಲ್ಲಯ್ಯಾ.
ಎಂತೋ ! ಲಿಂಗ ತಂದೆ ಎಂತಯ್ಯಾ? ಎನ್ನ ಪೂರ್ವಲಿಖಿತ.
ಬೆರಣಿಯ ನಾಯಲಲ್ಲದೆ ಅಟ್ಟುಣ್ಣ ತೆರಹಿಲ್ಲವೆನಗೆ.
ನೀ ಕರುಣಿಸು ಕೂಡಲಸಂಗಮದೇವಾ.
ಹೊನ್ನು ಹೆಣ್ಣು ಮಣ್ಣೆಂಬ ವಿಷಯಗಳು ಅವರನ್ನು ಮರುಳು ಮಾಡಿ, ಪರಮಾತ್ಮನನ್ನು ಮರೆಯಿಸಿದ ಲೀಲೆಯನ್ನೂ ಅವರಲ್ಲಿ ಅದರಿಂದ ಉಂಟಾದ ಕಳವಳವನ್ನೂ ಬಸವಣ್ಣನವರು ಈ ಬಗೆಯಾಗಿ ಬಣ್ಣಿಸಿರುವರು :
ಊರ ಸೀರಿಗೆ ಅಗಸ ಹಡೆದಂತೆ
ಹೊನ್ನೆನ್ನದು, ಹೆಣ್ಣೆನ್ನದು, ಮಣ್ಣೆನ್ನದೆಂದು ಮರುಳಾದೆ ;
ನಿಮ್ಮನರಿಯದ ಕಾರಣ ಕೆಮ್ಮನೆ ಕೆಟ್ಟೆ
ಕೂಡಲಸಂಗಮದೇವಾ !
ಕಾಂಚನವೆಂಬ ನಾಯ ನೆಚ್ಚಿ
ನಿಮ್ಮ ನಾನು ಮರೆದೆನಯ್ಯಾ !
ಕಾಂಚನಕ್ಕೆ ವೇಳೆಯಲ್ಲದೆ, ಲಿಂಗಕ್ಕೆ ವೇಳೆಯಿಲ್ಲ.
ಹಡಿಕೆಗೆ ಮೆಚ್ಚಿದ ಸೊಣಗ
ಅಮೃತದ ಸವಿಯ ಬಲ್ಲುದೆ, ಕೂಡಲಸಂಗಮದೇವಾ !