ಈ ಪುಟವನ್ನು ಪ್ರಕಟಿಸಲಾಗಿದೆ

96
ಅಂತರ್ನಿರೀಕ್ಷಣದಿಂದ ಅದರ ಸತ್ಯತೆಯನ್ನು ಮನವರಿಕೆ ಮಾಡಿಕೊಂಡರು. ಮಾಯೆಯ ಸೆಳೆತವನ್ನು ಕುರಿತು ಅವರು ಉಸಿರಿರುವುದೇನೆಂದರೆ -
ನಾನೊಂದು ನೆನೆದೊಡೆ ತಾನೊಂದು ನೆನೆವುದು ;
ನಾನಿತ್ತಲೆಳೆದೊಡೆ ತಾನತ್ತಲೆಳೆವುದು ;
ತಾ ಬೇರೆಯನ್ನ ನಳಲಿಸಿ ಕಾಡಿತ್ತು;
ತಾ ಬೇರೆಯನ್ನು ಬಳಲಿಸಿ ಕಾಡಿತ್ತು;
ಕೂಡಲಸಂಗನ ಕೂಡಿಹೆನೆಂದೊಡೆ.
ತಾನೆನ್ನ ಮುಂದುಗೆಡಿಸಿತ್ತು ಮಾಯೆ.
ತಮಗೆ ಕಾಯವಿಕಾರ, ಇಂದ್ರಿಯವಿಕಾರ, ಮನೋವಿಕಾರಗಳು ಕಾಡುವವೆಂಬುದನ್ನು ಅವರು ಕೂಡಲೇ ಕಂಡುಹಿಡಿದರು. ಕಾಯಕ್ಕೆ ಬೇಕಾದ್ದು ಕೂಳು, ರಕ್ಷಣಗಳು, ಇಂದ್ರಿಯಗಳಿಗೆ ಬೇಕಾದದ್ದು ವಿಷಯಗಳು. ಅವನ್ನವು ಮನೋಮುಖದಿಂದ ಬೇಡುವವು. ಮನಸ್ಸಿಗೆ ಸ್ವತಂತ್ರವಾಗಿ ಬೇಕಾಗುವದು ಮನ್ನಣೆ-ಮರ್ಯಾದೆ. ಅಂತೂ ಅವೆಲ್ಲವುಗಳಿಗೆ ಬೇಕಾದವು ಹೆಣ್ಣು ಹೊನ್ನು ಮಣ್ಣು ಅಥವಾ ಕಾಮಿನಿ, ಕಾಂಚನ, ಕೀರ್ತಿ, ಅವನ್ನು ಪಡೆಯುವ ಆತುರ, ಪಡೆಯದಾಗ ಉಂಟಾದ ಕಾತರ ಇವೇ ವಿಕಾರಗಳು, ಅವುಗಳ ಕಾಟವನ್ನು ಬಸವಣ್ಣನವರು ಈ ಬಗೆಯಾಗಿ ಬಣ್ಣಿಸಿರುವರು :
ಕಾಯವಿಕಾರ ಕಾಡಿಹುದಯ್ಯಾ ;
ಮನೋವಿಕಾರ ಕೂಡಿಹುದಯ್ಯಾ ;
ಇಂದ್ರಿಯವಿಕಾರ ಸುಳಿವುದಯ್ಯಾ ;
ಸುಳಿವಿನೊಳಗೆ ಸುಳಿಯುತ್ತಲಿದ್ದೇನೆ ; ಸಿಲುಕಿಸದಿರಯ್ಯಾ,
ಅನ್ಯಚಿತ್ತವಿರಿಸದಿರಯ್ಯಾ : ನಿಮ್ಮ ಚಿತ್ತವಿರಿಸಯ್ಯಾ.
ಅನುಪಮ ಸುಖಸಾರಾಯ ಶರಣರಲಿ,
ಕೂಡಲಸಂಗಮದೇವಯ್ಯಾ, ಇದನ್ನೆ ಬೇಡುವೆನಯ್ಯಾ,