ಈ ಪುಟವನ್ನು ಪ್ರಕಟಿಸಲಾಗಿದೆ
13

ಈ 'ದಿವ್ಯಜೀವನ'ದಲ್ಲಿ ಎಂಟು 'ಅಲೆ'ಗಳಿರುವವು. ಅವುಗಳಲ್ಲಿ ಬಸವಣ್ಣನವರ ದಿವ್ಯ ಬಹಿರಂಗ-ಅಂತರಂಗ ಜೀವನದಲ್ಲಿಯ ಹಾಗೂ ಭವ್ಯ ಬೋಧೆಯಲ್ಲಿಯ ಬಗೆಬಗೆಯ ಉಜ್ವಲ ರತ್ನಗಳನ್ನು ಇರಿಸಲಾಗಿದೆ. ಅವುಗಳನ್ನು ಬಳಸಿ, ತಮ್ಮ ಬಾಳನ್ನು ಉಜ್ವಲಗೊಳಿಸಿ, ಬಸವಣ್ಣನವರ ಭಕ್ತರು ತಮ್ಮ ಬೆಳಕಿನ ಬಾಳಿನಿಂದ ಬಸವಣ್ಣನವರ ಪ್ರಭಾವವನ್ನು ಪ್ರಪಂಚದಲ್ಲಿ ಬೀರಬೇಕೆಂದು ಬಯಸಿ ಈ 'ದಿವ್ಯ ಜೀವನ'ವನ್ನು ಆದರ್ಶಪ್ರಿಯ ಕನ್ನಡಿಗರಿಗೆ ಸಲ್ಲಿಸಿರುವೆ. ಬಸವಣ್ಣನವರು ಅವರಿಗೆ ಸಾಕಷ್ಟು ಬೆಳಕನ್ನೂ ಬಲವನ್ನೂ ದಯಪಾಲಿಸಲಿ! ಇದೇ ಭಗವಂತನ ಅಡಿದಾವರೆಗಳಲ್ಲಿ ಪ್ರಾರ್ಥನೆ.

ನನ್ನ ಸನ್ಮಾನ್ಯ ಹಿರಿಯ ಸ್ನೇಹಿತರಾದ ಡಾ. ದಿವಾಕರ ರಂಗರಾಯರು ನನ್ನಿಂದ ಈ ಗ್ರಂಥವನ್ನು ಬರೆಯಿಸಿದರು. ಅದಕ್ಕೆ ಅಂದವಾದ 'ಮುನ್ನುಡಿ' ಯನ್ನು ಬರೆಯಿಸಿ, ತಮ್ಮ ಲೋಕ ಶಿಕ್ಷಣ ಮಾಲೆ' ಯಲ್ಲಿ ಪ್ರಕಟಿಸಿದರು. ಅದಕ್ಕಾಗಿ ಅವರಿಗೆ ನನ್ನ ಹಾರ್ದಿಕ ಧನ್ಯವಾದಗಳು. ನನ್ನ ಆಪ್ತಸ್ನೇಹಿತರಾದ ಶ್ರೀ ಸಂಗೋರಾಮ ಕೃಷ್ಣರಾಯರು ಈ ಗ್ರಂಥವನ್ನು ಓದಿಸಿಕೊಂಡು ಕೆಲ ಸಲಹೆಗಳನ್ನಿತ್ತರು. ತಮ್ಮ ಕೆಲ ಗ್ರಂಥಗಳನ್ನು ಕೊಟ್ಟರು. ನನ್ನ ತರುಣ ಸ್ನೇಹಿತರಾದ ಶ್ರೀ ವಾಯಿಕರ ದತ್ತರಾಯರು ಕೊನೆಯ ಮೂರು 'ಅಲೆ'ಗಳ ಶುದ್ದ ಪ್ರತಿಯನ್ನು ಮಾಡಿಕೊಟ್ಟರು. ಅದಕ್ಕಾಗಿ ಈ ಉಭಯತರಿಗೆ ನನ್ನ ವಂದನೆಗಳು, ಅದೇ ಮೇರೆಗೆ ಇದನ್ನು ಅಂದವಾಗಿ ಮುದ್ರಿಸಿದ್ದಕ್ಕಾಗಿ ಬೆಂಗಳೂರು ಸಂಯುಕ್ತ ಕರ್ನಾಟಕ ಮುದ್ರಣ ವಿಭಾಗದ ಮುಖ್ಯಸ್ಥರಿಗೆ ನಾನು ವಂದಿಸದಿರಲಾರೆ.

ಅಥಣಿ

ತಮ್ಮ

ಅಕ್ಷಯತೃತೀಯಾ
ಮ.ಶ್ರೀ.ದೇಶಪಾಂಡೆ

ಶಕೆ ೧೮೮೮