ಈ ಪುಟವನ್ನು ಪ್ರಕಟಿಸಲಾಗಿದೆ

12

ಗ್ರಂಥಕರ್ತರ ಅರಿಕೆ

ಈ ಚರಿತ್ರಗ್ರಂಥವು ಸಂಶೋಧನಾತ್ಮಕ ಕೃತಿಯಲ್ಲ. ಇದು ಒಂದು ರಚನಾತ್ಮಕ ಕಲಾಕೃತಿ, ಹಿಂದಿನ ಮತ್ತು ಇಂದಿನ ಪಂಡಿತ ಸಂಶೋಧಕರು ಬಸವಣ್ಣನವರ ಜೀವನಕ್ಕೆ ಸಂಬಂಧಿಸಿದ ಕೆಲ ಪ್ರಧಾನ ಅಂಶಗಳನ್ನು ಕಂಡು ಹಿಡಿದಿರುವರು. ಇನ್ನೂ ಹೊಸ ಸಂಶೋಧನೆ ನಡೆದೇ ಇರುವದು ಸ್ವಾಬಾವಿಕ. ಈಗಾಗಲೇ ಹಸ್ತಗತವಾಗಿರುವ ಅಂಶಗಳ ಮೂಲಕ ನಿರ್ಮಿಸಲಾದ ರೂಪರೇಷೆಯಲ್ಲಿ ಕಲ್ಪನೆಯ ಕೊಂಚ ಬಣ್ಣವನ್ನು ಬೆರೆಸಿ, ಇಲ್ಲಿ ಬಸವಣ್ಣನವರ ಶ್ರೀಮೂರ್ತಿಯ ಸಚೇತನ ಚಿತ್ರವನ್ನು ಬರೆಯಲು ಯತ್ನಿಸಲಾಗಿದೆ. ಫ್ರೆಂಚ್ ಭಾಷೆಯಲ್ಲಿ ಆಂದ್ರೆ ಮೋರ್‌ವಾ ಎಂಬ ಹಿರಿಯ ಲೇಖಕರು 'ಏರಿಯಲ್' ಎಂಬ ಹೆಸರಿನ, ಚಾರಿತ್ರಿಕ ಸನ್ನಿವೇಶಗಳನ್ನು ಆಧರಿಸಿದ, ಈ ಬಗೆಯ ಕಲ್ಪನಾ ಚರಿತ್ರವನ್ನು ಬರೆದಿರುವರು. ಅದು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ತುಂಬ ಲೋಕಪ್ರಿಯವಾಗಿರುವುದು. ನಮ್ಮ ಪ್ರಸ್ತುತ ಗ್ರಂಥದಲ್ಲಿ ಅದರಲ್ಲಿಯ ಕೆಲ ಪ್ರಧಾನ ಅಂಶಗಳನ್ನು ಅನುಕರಿಸಲು ಯತ್ನಿಸಲಾಗಿದೆ. ಅದನ್ನು ಪೂರ್ತಿಯಾಗಿ ಅನುಕರಿಸುವದು ಸರಿದೋರಲಿಲ್ಲ. ಕಾರಣಾಂತರಗಳ ಮೂಲಕ ಅದು ಸಾಧ್ಯವೂ ಆಗಲಿಲ್ಲ. ನಮ್ಮ ಯತ್ನವು ಅದೆಷ್ಟು ಯಶಸ್ಸನ್ನು ಪಡೆದಿದೆ ಎಂಬುದನ್ನು ಸಹೃದಯರಾದ ಜಾಣರಾದ ವಿಮರ್ಶಕರು ನಮಗೆ ಅರುಹಬೇಕಾಗಿ ಬಿನ್ನಹ. ಅವರು ಇದರ ಗುಣದೋಷಗಳನ್ನು ತಿಳಿಸಿದರೆ, ಮುಂದೆ ದೋಷಗಳನ್ನು ಅಳಿಸಿ ಗುಣಗಳನ್ನು ಬೆಳೆಸಲು ನಮಗೆ ಅನುಕೂಲವಾಗುವದು.

ಬಸವಣ್ಣನವರ ಜೀವನರತ್ನಾಕರವನ್ನು ಹಿರಿಯ ಸಂಶೋಧಕರು ಈಗ ಆಗಲೇ ಕಡೆದಿರುವರು, ಕೆಲ ಬೆಲೆಯುಳ್ಳ ರತ್ನಗಳನ್ನು ಪಡೆದಿರುವರು. ನನ್ನ ಒಲವಿನ ಕಲ್ಪನೆಯ ಚಿನ್ನತ ಎಳೆಯಲ್ಲಿ ಅವನ್ನೆಯೇ ಪವಣಿಸಿ, ಈ ರತ್ನಮಾಲೆಯನ್ನು ಕೋದಿರುವೆ. ಅದನ್ನು ಬಸವಣ್ಣನವರ ಸಿರಿಗೊರಳಲ್ಲಿ ಭಕ್ತಿಭಾವದಿಂದ ಇರಿಸಬಯಸುವೆ. ಅವರು ಅದನ್ನು ಪ್ರೀತಿಯಿಂದ ಧರಿಸುವರೆಂದು ಭಾವಿಸುವೆ. ಇದೊಂದು ಬಸವಣ್ಣನವರ ಪಾವನಸ್ಮೃತಿಗೆ ಸಲ್ಲಿಸಿದ ನನ್ನ ಅಳಿಲಸೇವೆ. ಬಲ್ಲ ಹರಿಯರೂ ಬಸವಣ್ಣನವರ ಭಕ್ತರೂ ಇದನ್ನು ಮನ್ನಿಸಬೇಕಾಗಿ ಬಿನ್ನಹ.