ಈ ಪುಟವನ್ನು ಪ್ರಕಟಿಸಲಾಗಿದೆ

ಅಲೆ : ಎಂಟು

ಉಪಸಂಹಾರ

ಹಿನ್ನೋಟ :
ಬಸವಣ್ಣನವರ “ದಿವ್ಯಜೀವನ' ದ ವೈಭವವನ್ನು ಈವರೆಗೆ ಯಥಾಶಕ್ತಿ ಕಾಣಿಸಲು ಯತ್ನಿಸಲಾಗಿದೆ. ಬಸವಣ್ಣನವರ ದಿವ್ಯ ಜೀವನದ ಹಿನ್ನೆಲೆಯಾದ ಈಶೇಚ್ಛೆಯನ್ನೂ ಅಂದಿನ ಪರಿಸ್ಥಿತಿಯನ್ನೂ ಅದನ್ನು ಕಾಣುವ ನಮ್ಮ ದೃಷ್ಟಿಯನ್ನೂ ಪೀಠಿಕೆಯಲ್ಲಿ ಕಾಣಿಸಲಾಯಿತು. ತರುವಾಯ ಅವರ ಬಾಹ್ಯ ಜೀವನದ, ಆತ್ಮೋದ್ಧಾರದ ಪೂರ್ವಸಿದ್ಧತೆಯನ್ನು 'ಪೂರ್ವರಂಗ' ದಲ್ಲಿಯೂ ಅವರು ನೆರವೇರಿಸಿದ ಲೋಕೋದ್ಧಾರದ ಮಹಾಕಾರ್ಯವನ್ನು ಉತ್ತರರಂಗ' ದಲ್ಲಿಯೂ ವಿವರಿಸಲಾಯಿತು. ಆಮೇಲೆ ಅವರ ಆಂತರಿಕ ಜೀವನದಲ್ಲಿಯ ಆಧ್ಯಾತ್ಮಿಕ ವಿಕಾಸವನ್ನು 'ಭಕ್ತಿಯ ಬೆಳೆ' ಯಲ್ಲಿಯೂ ಅವರು ಜನರಿಗೆ ಸಲ್ಲಿಸಿದ ದಿವ್ಯಸಂದೇಶವನ್ನು ಉಜ್ವಲ ಬೋಧೆಯನ್ನು 'ಬೋಧಸುಧೆ' ಯಲ್ಲಿಯೂ ವಿಶದೀಕರಿಸಲಾಗಿದೆ. ಈ ರೀತಿ ಬಹಿರಂಗ- ಅಂತರಂಗ ಜೀವನದ ಸಮಗ್ರ ದರ್ಶನವನ್ನು ಭಾವಿಕರಿಗೆ ನೀಡಲಾಗಿದೆ. ಈ “ಉಪಸಂಹಾರ' ದಲ್ಲಿ ಅವರ ಅಲೌಕಿಕ ಹಿರಿಮೆಯ ಕಿರಿನೋಡವನ್ನು ಅರುಹಿ ವಿರಮಿಸುವೆ. ಈ 'ದಿವ್ಯ ಜೀವನ'ವು ನಮ್ಮ ಬೆಳೆಯಲಿರುವ ಯುವಕರ ಜೀವನಕ್ಕೆ ದಿವ್ಯವೈಭವದ ಕೊಡುಗೆಯನ್ನು ನೀಡಲಿ ! ಅವರ ಬಾಳು ಹೊಸ ಬೆಳಕಿನಿಂದ ಹೊಳೆಯಲಿ ! !
ಅಲೌಕಿಕ ಹಿರಿಮೆ :
ಬಸವಣ್ಣನವರು ನಮ್ಮ ಕನ್ನಡ ಜನಾಂಗವನ್ನು ಉದ್ದರಿಸಲು ಆಗಾಗ ಹೆಣಗಿದ ಅಲೌಕಿಕರಾದ ಹಿರಿಯ ಮಹಾತ್ಮರಲ್ಲಿ ಒಬ್ಬರು. ಅವರದು ಉತ್ಕಟಬುದ್ದಿ, ಉತ್ಕಟಭಾವ, ಉತ್ಕಟಸಂಕಲ್ಪ. ತಮ್ಮ